ಗಂಗಾಪೂರ ಪೇಟೆಯ ದುರ್ಗಾದೇವಿ ಜಾತ್ರೆ ಜೂ. 6 ರಿಂದ

ಗದಗ,ಮೇ16: ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗಂಗಾಪುರ ಪೇಟೆಯ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಇದೇ ಜೂನ್ 6 ರಿಂದ ಜೂನ್ 13 ರವರೆಗೆ ಜರುಗಲಿದೆ ಎಂದು ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ.ಎಸ್.ಪಾಟೀಲ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ವರ್ಷ ಕೋರೋನಾ ದಿಂದಾಗಿ ದುರ್ಗಾದೇವಿ ಜಾತ್ರೆಯನ್ನು ಮಾಡಲು ಸಾಧ್ಯವಾಗಲಿಲ್ಲ ಈ ಬಾರಿ ಅದ್ದೂರಿಯಾಗಿ ನಮ್ಮೂರ ದೇವಿಯ ಜಾತ್ರೆಯನ್ನು ಸಂಭ್ರಮ ಸಡಗರದಿಂದ ಆಚರಿಸಲು ಎಲ್ಲರೂ ಉತ್ಸುಕರಾಗಿದ್ದಾರೆ ಎಂದು ಹೇಳಿದರು.
ಇದೇ ಜೂನ್ 6 ರಂದು ಸಂಜೆ 5.07 ಗಂಟೆಗೆ ಕಳಸಾರೋಹಣ ಕಾರ್ಯಕ್ರಮ ಜರುಗುವುದು. ಜೂನ್ 9 ರಂದು ಶುಕ್ರವಾರ ಊರ ದೇವರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನೂರಾರು ಡೊಳ್ಳಿನ ಕಲಾತಂಡಗಳ ಜೊತೆಗೆ ಸಕಲ ಮಂಗಲವಾದ್ಯ ವೈಭವಗಳೊಂದಿಗೆ ನಗರದ ಪ್ರಮುಖ ದೇವಸ್ಥಾನಗಳಿಗೆ ಮೆರವಣಿಗೆ ಮೂಲಕ ತೆರಳಿ ಉಡಿ ತುಂಬಲಾಗುವುದು. ಜೂನ್ 10 ರಂದು ಶನಿವಾರ ಸಂಜೆ 6.05 ಗಂಟೆಗೆ ಶ್ರೀದೇವಿಯ ಮಹಾರಥೋತ್ಸವ ಸಂಭ್ರಮದಿಂದ ಜರುಗುವುದು. ಜೂನ್ 11 ರಂದು ರವಿವಾರ ಸಂಜೆ 5.30 ಗಂಟೆಗೆ ಲಘು ರಥೋತ್ಸವ ಜರುಗುವುದು. ಜೂನ್ 12 ರಂದು ಸೋಮವಾರ ಮಧ್ಯಾಹ್ನ 12.20 ಗಂಟೆಗೆ ಅಭಿಜಿತ್ ಲಗ್ನದ ಶುಭ ಮುಹೂರ್ತದಲ್ಲಿ ಸುಮಾರು 25 ಜೋಡಿಗಳ ಸಾಮೂಹಿಕ ವಿವಾಹಗಳು ಜರುಗುವದು. ನಂತರ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಾತ್ರಾ ಮಹೋತ್ಸವದ ಹಿರಿಯ ಸಲಹಾಸಮಿತಿಯ ಸದಸ್ಯರಾದ ಸಿದ್ದಣ್ಣ ಪಲ್ಲೇದ ಅವರು ಮಾತನಾಡಿ, ನಾಡಿನ ಹಲವಾರು ಜಾತ್ರೆಗಳಲ್ಲಿ ನಮ್ಮೂರಿನ ದುರ್ಗಾದೇವಿ ಜಾತ್ರೆಯೂ ಒಂದಾಗಿದೆ. ಪ್ರಮುಖವಾಗಿ ಡೊಳ್ಳಿನ ಜಾತ್ರೆ ಎಂದು ಕರೆಯಲ್ಪಡುವ ಈ ಜಾತ್ರೆಯಲ್ಲಿ ಜಿಲ್ಲೆಯಾದ್ಯಂತ ನೂರಕ್ಕೆ ಹೆಚ್ಚು ಗ್ರಾಮಗಳ ಡೊಳ್ಳಿನ ಕಲಾತಂಡಗಳು ಭಾಗವಹಿಸಲಿವೆ. ಅಲ್ಲದೆ, ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ, ನಾಟಕ, ಕ್ರೀಡಾಸ್ಪರ್ಧೆ, ಮನರಂಜನೆ, ಆರೋಗ್ಯ ಶಿಬಿರ, ಯೋಗ ಶಿಬಿರ, ನೃತ್ಯ ಸಂಗಮ, ನಗೆ ಹಬ್ಬ, ಜನಪದ ಸಂಭ್ರಮ, ಮಹಿಳಾಗೋಷ್ಠಿ ಹಾಗೂ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ವಧು-ವರರಾಗಬಯಸುವವರು ಮೇ. 25 ಒಳಗಾಗಿ ಮೋಹನ ಇಮರಾಪೂರ-9845649443, ಯಮನಪ್ಪ ಗೋಂದಿ-9036508979 ಅವರಲ್ಲಿ ಹೆಸರನ್ನು ನೋಂದಾಯಿಸಬೇಕು. ಮತ್ತು ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲು ಹೆಚ್ಚಿನ ಪ್ರಚಾರ ನೀಡಬೇಕೆಂದು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಹಿರಿಯ ಸಲಹಾ ಸಮಿತಿ ಸದಸ್ಯ ಬಸವರಾಜ ಹಿಕ್ಕಲಗುತ್ತಿ, ಉಪಾಧ್ಯಕ್ಷರಾದ ಸಂಜೀವ ಚವ್ಹಾಣ, ಯಮನಪ್ಪ ಗೋಂದಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಇಮರಾಪೂರ, ಕರಬಸಪ್ಪ ಮುದಕಟ್ಟಿ, ಸಹ ಖಜಾಂಚಿ ಮೋಹನ ಇಮರಾಪೂರ, ಮುತ್ತು ಜಡಿ, ಮಲ್ಲೇಶ ಕೊಣ್ಣೂರ, ದೇವರಾಜ ಕವಲೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.