ಗಂಗಾನಿವಾಸ : ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ

ಅಡ್ಡಿಪಡಿಸಿದ ಯುವಕರ ಮೇಲೆ ಲಾಠಿ ಚಾರ್ಜ್
ರಾಯಚೂರು.ಮೇ.28- ಗಂಗಾ ನಿವಾಸ ಬಳಿಯಿರುವ ನಗರಸಭೆ ಸ್ಥಳದಲ್ಲಿ ನಿರ್ಮಾಣಗೊಂಡ ನಾಲ್ಕು ಮಳಿಗೆ ತೆರವಿಗೆ ಮುಂದಾದ ನಗರಸಭೆ ಕಾರ್ಯಾಚರಣೆಗೆ ಅಡ್ಡಿಯಾದ ಯುವಕರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದಂತಹ ಘಟನೆ ಇಂದು ನಡೆಯಿತು.
ಗಂಗಾನಿವಾಸ ಮುಂಭಾಗದಲ್ಲಿ ಮಸ್ಜೀದಿವೊಂದರ ಮುಂದೆ ಈ ನಾಲ್ಕು ಮಳಿಗೆಗಳನ್ನು ನಿರ್ಮಿಸಲಾಗುತ್ತಿತ್ತು. ಈ ಮಳಿಗೆ ನಿರ್ಮಾಣಕ್ಕೆ ಸಂಬಂಧಿಸಿ ನಗರಸಭೆಗೆ ದೂರು ನೀಡಲಾಗಿತ್ತು. ಮಸ್ಜೀದ್ ಮುಂಭಾಗದ ಸ್ಥಳ ನಗರಸಭೆಗೆ ಸೇರಿದ್ದರಿಂದ ಕಟ್ಟಡ ನಿರ್ಮಿಸದಂತೆ ಸೂಚಿಸಲಾಗಿತ್ತು. ಆದರೆ, ಯಾವುದೇ ಪರವಾನಿಗೆ ಪಡೆಯದೇ, ನಾಲ್ಕು ಮಳಿಗೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ಇಂದು ನಗರಸಭೆ ತೆರವು ಕಾರ್ಯಾಚರಣೆಗೆ ಮುಂದಾದಾಗ ಏಕಾಏಕಿ ಅಲ್ಲಿ ನೂರಾರು ಜನ ಸೇರಲು ಕಾರಣವಾಯಿತು.
ಕಟ್ಟಡ ತೆರವು ತಡೆಯುವಂತೆ ನಗರಸಭೆ ಸದಸ್ಯರ ಪತಿ ವಹೀದ್ ಮತ್ತು ನಗರಸಭೆ ಸದಸ್ಯರಾದ ಸಾಜೀದ್ ಸಮೀರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಸ್ಲಾಂ ಪಾಷಾ ಅವರು ಮನವಿ ಮಾಡಿದರು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ, ಸುಧೀರ್ಘ ಚರ್ಚೆಯ ನಂತರ ಕೊನೆಗೂ ರಸ್ತೆ ಸ್ಥಳ ಅತಿಕ್ರಮಿಸಿದ ಕಟ್ಟಡವನ್ನು ಸ್ವಯಂ ತೆರವುಗೊಳಿಸಿಕೊಳ್ಳುವುದಾಗಿ ಹೇಳಿದರು. ಆದರೆ, ನಗರಸಭೆ ಅಧಿಕಾರಿಗಳು ಇದಕ್ಕೆ ಒಪ್ಪದೇ ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ನಗರಸಭೆ ಕಾರ್ಯಾಚರಣೆಗೆ ಕೆಲ ಯುವಕರು ಅಡ್ಡಿ ಪಡಿಸಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿ, ಜನರನ್ನು ಚದುರಿಸಬೇಕಾಯಿತು.
ಅಕ್ಕಪಕ್ಕದ ಮಹಿಳೆಯರು ಕಾರ್ಯಾಚರಣೆ ತಡೆಯಲು ಮುಂದಾದಾಗ ಪೊಲೀಸ್ ವ್ಯಾನ್ ಮತ್ತು ಸಿಬ್ಬಂದಿ ವರ್ಗ ಅಡ್ಡಗಟ್ಟಿ ಯಾರು, ಕಾರ್ಯಾಚರಣೆ ಸ್ಥಳಕ್ಕೆ ಬಾರದಂತೆ ತಡೆಯಲಾಯಿತು. ಲಾಠಿ ಚಾರ್ಜ್ ಆರಂಭಗೊಳ್ಳುತ್ತಿದ್ದಂತೆ ವಾತಾವರಣ ಉದ್ರಿಕ್ತಗೊಂಡಿತು. ಎಲ್ಲರನ್ನು ಸ್ಥಳದಿಂದ ದೂರ ಸರಿಸಿ, ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಲಾಯಿತು.