ಗಂಗಾನಗರದಲ್ಲಿ ಗಲಾಟೆ: 10 ಜನ ವಶಕ್ಕೆ

ಕಲಬುರಗಿ,ಜೂ.12-ಇಲ್ಲಿನ ಗಂಗಾನಗರದ ಹನುಮಾನ ಗುಡಿ ಹತ್ತಿರ ಹಣ ಕೊಡುವ ಮತ್ತು ತೆಗೆದುಕೊಳ್ಳುವ ವಿಷಯಕ್ಕೆ ಹೊಡೆದಾಟ ನಡೆಸಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುವುದರ ಮೂಲಕ ಭಯ ಹುಟ್ಟುವಂತೆ ಮಾಡಿದ ಮತ್ತು ಶಾಂತಿಯನ್ನು ಕದಡಿದ ಅಪರಾಧದಡಿ 10 ಜನರನ್ನು ರಾಘವೇಂದ್ರ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗಲಾಟೆ ನಡೆಯುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪಿಎಸ್‍ಐ ಮಹೇಶ್ ಸಿಂಗ್, ಸಿಬ್ಬಂದಿಗಳಾದ ಮಲ್ಲಿನಾಥ, ಕೇಶವ ನಾರಾಯಣ, ಬಸವರಾಜ, ಸುರೇಶ್ ಅವರು, ನಗರದ ಈದ್ಗಾ ಲೇಔಟ್‍ನ ಮೊಹ್ಮದ್ ಇಸ್ಮಾಯಿಲ್ ಪಟೇಲ್ (28), ಖದೀರ್ ಚೌಕ್‍ನ ಅಬ್ದುಲ್ ಹಮೀದ್ (25), ರೇವಣಸಿದ್ದೇಶ್ವರ ಕಾಲೋನಿಯ ಅಭಿಷೇಕ್ ಯಂಕಂಚಿ (26), ಜೆ.ಆರ್.ನಗರದ ಆಕಾಶ ಗುತ್ತೇದಾರ (27), ಬಾಳಿ ಕಾಲೋನಿಯ ಅಭಿಲಾಶ ನಾಯಿಕೋಡಿ (31), ದೇವಿ ನಗರದ ಶಿವಕುಮಾರ ಹಡಪದ (39), ನವಿನಕುಮಾರ ವಳಸಂಗಿಕರ (31), ಮಹಿಬೂಬ್ ಕುಡಕಿ (32), ಡಬರಾಬಾದ್‍ನ ಪ್ರಕಾಶ ಇಟಗುಂಡಿ (38) ಮತ್ತು ಜಿಲಾನಾಬಾದ್‍ನ ಸೈಯದ್ ಜಾಫರ್ ಅವರನ್ನು ವಶಕ್ಕೆ ಪಡೆದಿದ್ದಾರೆ.