ಗಂಗಾಧರೇಶ್ವರ ಸ್ವಾಮಿಯ ಜೀರ್ಣೋದ್ಧಾರ

ಬೆಂಗಳೂರು, ಮೇ ೨೪-ನಗರದ ಓ.ಟಿ.ಸಿ. ರಸ್ತೆಯಲ್ಲಿ ನೆಲಸಿರುವ ಶ್ರೀ ಲಾಲ್‌ದಾಸ್ ವೆಂಕಟರಮಣ ಸ್ವಾಮಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶ್ರೀ ಲಾಲ್‌ದಾಸ್ ಗಂಗಾಧರೇಶ್ವರ ಸ್ವಾಮಿಯ ಪುನರಾವರ್ತನ ಜೀರ್ಣೋದ್ಧಾರ ಪ್ರತಿಷ್ಠಾನ ಅಷ್ಠಬಂಧನ ಮಹಾಕುಂಭಾಭಿಷೇಕ ಮಹೋತ್ಸವವು ಇಂದಿನಿಂದ ಮೇ ೨೬ರ ಭಾನುವಾರದವರೆಗೆ ಏರ್ಪಡಿಸಲಾಗಿದೆ.
ಇಂದು ಸಂಜೆ ೬ಕ್ಕೆ ಗಣಪತಿ ಪೂಜೆಯೊಂದಿಗೆ ವಿವಿಧ ಪೂಜಾ ಕಾರ್ಯಕ್ರಮ, ಅಂಕುರಾರ್ಪಣೆ, ರಕ್ಷಾಬಂಧನ, ತೀರ್ಥ ಪ್ರಸಾದ ವಿನಿಯೋಗ, ನಾಳೆ ಬೆಳಿಗ್ಗೆ ೮ಕ್ಕೆ ವೇದ ಪಾರಾಯಣ, ವಿವಿಧ ಹೋಮಗಳು, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.
ಮೇ ೨೬ ರಂದು ಬೆಳಿಗ್ಗೆ ೭ಕ್ಕೆ ವೇದ ಪಾರಾಯಣ, ಶಾಂತಿ ಹೋಮ, ಪ್ರಾಣಪ್ರತಿಷ್ಠಾಪನೆ, ಬೆಳಿಗ್ಗೆ ೯.೩೦ಕ್ಕೆ ವಿಮಾನಗೋಪುರ ಕುಂಭಾಭಿಷೇಕ, ಪುನರಾವರ್ತನ ಜೀರ್ಣೋದ್ಧಾರ ಪ್ರತಿಷ್ಠಾಪನಾ ಅಷ್ಟಾಬಂಧನ ಮಹಾಕುಂಭಾಭಿಷೇಕದಲ್ಲಿ ಕಲರ್‍ಸ್ ಕನ್ನಡ ಮಹರ್ಷಿ ದರ್ಶನದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿರವರು ಆಗಮಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಈ ಪ್ರತಿಷ್ಠಾಪನಾ ಮಹಾಕುಂಭಾಭಿಷೇಕವು ಶೈವಾಗಮ ರೀತ್ಯಾ ಶತಪ್ರತಿಷ್ಠಾಪನಾಚಾರ್ಯ ಆಗಮಿಕ ಡಾ. ಕೆ.ಎಸ್.ಎನ್. ದೀಕ್ಷಿತ್ ಅವರ ನೇತೃತ್ವದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಹೆಚ್. ಬಸವರಾಜೇಂದ್ರ, ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಅಪರ ಜಿಲ್ಲಾಧಿಕಾರಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತ ಟಿ.ಎನ್. ಕೃಷ್ಣಮೂರ್ತಿ, ಮುಜರಾಯಿ ಕಾಮಗಾರಿಗಳ ಸಹಾಯಕ ಆಯುಕ್ತ ಜಿ. ಪುರುಷೋತ್ತಮ್,ಕಾರ್ಯನಿರ್ವಾಹಕ ಅಧಿಕಾರಿ ಜೆ. ದಯಾನಂದ, ಪ್ರಧಾನ ಅರ್ಚಕ ಕೆ.ಎನ್. ಶಿವಕುಮಾರ್, ಪಾರುಪತ್ತೇದಾರ ಎಲ್. ದೇವೇಂದ್ರಕುಮಾರ್ ಹಾಗೂ ಸೇವಾಕರ್ತರಾದ ಮಾಜಿ ಸಂಚಾಲಕ ಕೆ.ಎನ್. ರಾಘವೇಂದ್ರ, ಹೆಚ್.ಜಿ. ರಾಜಶೇಖರ್,ಎಚ್.ಜಿ. ರಘುನಾಥ್ ಅವರುಗಳು ಆಗಮಿಸಲಿದ್ದಾರೆ.