ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಮರು ಜೋಡಣೆಗೆ ಬೆಸ್ಕಾಂ ನಿರ್ಲಕ್ಷ್ಯ: ಆರೋಪ

ಚೇಳೂರು, ಜ. ೮- ಕಳೆದ ೧೩ ವರ್ಷಗಳ ಹಿಂದೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಸಿಕೊಂಡು ಕೃಷಿ ನಡೆಸುತ್ತಿದ್ದ ಕುಟುಂಬಕ್ಕೆ ಐದು ತಿಂಗಳಿಂದ ವಿದ್ಯುತ್ ಸಂಪರ್ಕ ಮರು ಜೋಡಣೆ ಮಾಡುವಲ್ಲಿ ಸಲ್ಲದ ವಿಳಂಬ ಅನುಸರಿಸುತ್ತಿರುವ ಬೆಸ್ಕಾಂ ಅಧಿಕಾರಿಗಳಿಗೆ ವಿರುದ್ಧ ಕುಟುಂಬವೊಂದು ಆಕ್ರೋಶ ಹೊರ ಹಾಕಿದೆ.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ವಿರೂಪಾಕ್ಷಿಪುರದ ಕೃಷಿಕ ಕೃಷ್ಣಯ್ಯ ಕುಟುಂಬ ಈ ಹಿಂದೆ ಪರಿಶಿಷ್ಟ ಪಂಗಡಗಳ ಕಲ್ಯಾಣ ನಿಗಮದಲ್ಲಿ ಗಂಗಾ ಕಲ್ಯಾಣ ಇಲಾಖೆಯಿಂದ ಬೋರ್‍ವೆಲ್ ಕೊರೆಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಿ ಪರಿವರ್ತಕವನ್ನೂ ಸಹ ಅಳವಡಿಸಲಾಗಿದೆ. ಹೀಗೆ ಕಳೆದ ಐದು ತಿಂಗಳ ಹಿಂದೆ ತೆಂಗಿನಮರವೊಂದು ಉರುಳಿ ಬಿದ್ದು ಕಂಬ ಮತ್ತು ತಂತಿ ಧರೆಗುರುಳಿತ್ತು. ಮೊದಲಿನಂತೆ ವಿದ್ಯುತ್ ಸಂಪರ್ಕಕ್ಕೆ ಮನವಿ ಮಾಡಲಾಗಿದ್ದು, ಕಂಬವನ್ನು ಅಳವಡಿಸಿ ತಂತಿ ಎಳೆದು ವಿದ್ಯುತ್ ಸಂಪರ್ಕ ಕೊಡುವಲ್ಲಿ ಮಾತ್ರ ವಿನಾ ಕಾರಣ ವಿಳಂಬ ಅನುಸರಿಸಲಾಗುತ್ತಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ತೆಂಗು ಅಡಿಕೆ ಗಿಡಗಳು ನೀರಿಲ್ಲದೆ ಒಣಗಿ ನಿಂತಿವೆ. ಐದು ತಿಂಗಳಿಂದ ವಿದ್ಯುತ್ ಇಲ್ಲದೇ ಕೃಷಿ ನಡೆಸಲಾಗುತ್ತಿಲ್ಲ. ಪಕ್ಕದ ಜಮೀನಿನಲ್ಲಿ ಹಾದು ಹೋದ ವಿದ್ಯುತ್ ಕಂಬ ಮತ್ತು ತಂತಿ ಮತ್ತೊಮ್ಮೆ ಅದೇ ರೀತಿ ಅಳವಡಿಸಿಕೊಡಲು ಬೆಸ್ಕಾಂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಪಕ್ಕದ ಜಮೀನಿನವರ ತಕರಾರು ನ್ಯಾಯಾಲಯ ಮೆಟ್ಟೀಲೆರಿ ಈಗ ನನ್ನಂತೆ ತೀರ್ಪು ಬಂದರೂ ಬೆಸ್ಕಾಂ ಅಧಿಕಾರಿಗಳು ಮೀನಾಮೇಷ ಎಣಿಸಿರುವುದು ಅನುಮಾನಕ್ಕೀಡು ಮಾಡಿದೆ. ತಾಂತ್ರಿಕ ಸಮಸ್ಯೆ ಇಲ್ಲದಿದ್ದರೂ ವಿದ್ಯುತ್ ಸಂಪರ್ಕಕ್ಕೆ ತಡೆ ಮಾಡುತ್ತಾ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯ ವೈಪಲ್ಯಕ್ಕೆ ಕಾರಣವಾಗುತ್ತಿದ್ದಾರೆ ಎಂದು ನೊಂದ ರೈತ ಕೃಷ್ಣಯ್ಯ ದೂರಿದ್ದಾರೆ.
ಮೊದಲಿದ್ದ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಮತ್ತೊಂದ ಭಾಗದಲ್ಲಿ ಹೇಗೆ ತರಲು ಸಾಧ್ಯವಿದೆ. ತೋಟದ ಬದಿಯಲ್ಲಿರುವ ಹುಣಸೇಮರಗಳನ್ನು ಕಡಿದು ತಂತಿ ಎಳೆಯಬೇಕಿದೆ. ಫಲ ನೀಡುವ ದೊಡ್ಡ ಮರಗಳನ್ನು ಯಾವ ರೈತ ಸಹ ಕಡಿಯುವುದಿಲ್ಲ. ಬೆಸ್ಕಾಂ ಅಧಿಕಾರಿಗಳು ಹುಣುಸೇಮರ ಕಡಿಯಲು ಸೂಚಿಸಿರುವುದು ವಿರೋಧವಾಗಿದೆ. ೧೩ ವರ್ಷಗಳಿಂದ ಇದ್ದ ವಿದ್ಯುತ್ ಸಂಪರ್ಕವನ್ನು ಮೊದಲಿನಂತೆ ಅಳವಡಿಸಿಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ಸರ್ಕಾರವೇ ಬೋರ್‍ವೆಲ್ ಕೊರೆಸಿ ವಿದ್ಯುತ್ ಸಂಪರ್ಕ ನೀಡಿದೆ. ಮೊದಲು ಬಾರದ ತಕಾರರು ದಿಢೀರ್ ಈಗ ಬರಲು ಕಾರಣ ತಿಳಿಯುತ್ತಿಲ್ಲ. ತೆಂಗಿನಮರ ಬಿದ್ದು ತಂತಿ ಕಡಿತವಾಗಿದೆ. ಮೊದಲಿನಂತೆ ಸಂಪರ್ಕ ನೀಡುವುದು ಅಧಿಕಾರಿಗಳ ಕರ್ತವ್ಯ ಎಂದು ರೈತ ಮಹಿಳೆ ನಾಗರತ್ನಮ್ಮ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದ ಸದಸ್ಯರಾದ ನರಸಿಂಹಸ್ವಾಮಿ, ಶೋಭಾ, ನಾಗರಾಜು, ವೀಣಾ, ನರಸಿಂಹರಾಜು, ಸಿದ್ದೇಶ ಉಪಸ್ಥಿತರಿದ್ದರು.