
ಕಲಬುರಗಿ,ಮಾ.18-ಖ್ಯಾತ ಸಂಗೀತ ಕಲಾವಿದೆ, ವಿದುಷಿ ಸರೋಜಾ ಅನಗರಕರ (78) ಅವರು ಇಂದು (ಮಾ.18) ಬೆಳಿಗ್ಗೆ 6.15ಕ್ಕೆ ಹೃದಯಾಘಾತದಿಂದ ನಿಧನರಾದರು.
ಪತಿ, ಪುತ್ರ, ಸೊಸೆ ಮತ್ತು ಇಬ್ಬರು ಮೊಮ್ಮಕಳು ಹಾಗೂ ಅಪಾರವಾದ ಶಿಷ್ಯ ಬಳಗವನ್ನು ಅವರು ಅಗಲಿದ್ದಾರೆ.
ವೃತ್ತಿಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದ ಅನಗರಕರ ಅವರು ವಿಷಯ ಮೇಲ್ವಿಚಾರಕರಾಗಿ ವಯೋನಿವೃತ್ತಿ ಹೊಂದಿದ್ದರು. ಸಂಗೀತವನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದ ಅವರು ಅನೇಕ ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆಯೆರೆದಿದ್ದರು.
1945ರ ಜೂನ್ 20 ರಂದು ಜನಿಸಿದ ಅನಗರಕರ ಅವರು ದೇಶದ ವಿವಿಧೆಡೆ ನಡೆದ ಅನೇಕ ಶ್ರೇಷ್ಠ ಸಂಗೀತ ಸಮ್ಮೇಳನಗಳಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಕಲ್ಯಾಣ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದರು.
ಸಹಸ್ರಾರು ಸಂಗೀತ ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯಾರ್ಜನೆಯನ್ನು ಮಾಡಿ ಶ್ರೇಷ್ಠ ಗುರುಗಳಾಗಿದ್ದರು. ಸಂಗೀತ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ, ಮಹಾರಾಷ್ಟ್ರಾ, ಆಂಧ್ರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಅನೇಕ ಪ್ರಶಸ್ತಿಗಳು ದೊರೆತಿವೆ. ಇವರ ಸಾಧನೆ ಪರಿಗಣಿಸಿ 2001ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಅನಗರಕರ ಅವರ ಅಗಲಿಕೆಯಿಂದ ಕಲ್ಯಾಣ ಕರ್ನಾಟಕ ಪ್ರಾಂಥದ ಸಂಗೀತ ಕ್ಷೇತ್ರಕ್ಕೆ ಭರಿಸಲಾರದ ನಷ್ಠವಾಗಿದೆ. ಅಪಾರವಾದ ಸಂಗೀತದ ಶಿಷ್ಯವೃಂದ ಇಂದು ತಬ್ಬಲಿಯಾಗಿದೆ. ಇವರ ಅಗಲಿಕೆಗೆ ನೂತನ ವಿದ್ಯಾಲಯ ಸಂಸ್ಥೆ, ಸ್ವರಮಾಧುರಿ ಸಂಗೀತ ವಿದ್ಯಾಲಯ, ಸ್ವರಾಲಯ, ಸುಮನ್ ಸಂಗೀತ ವಿದ್ಯಾಲಯ, ಶಾರದಾ ಸಂಗೀತ ವಿದ್ಯಾಲಯ, ಹಂಸಧ್ವನಿ ತಬಲಾ ಕಲಾನೀಕೆತನ, ವರ್ಣ ಸಿಂಧು ನೃತ್ಯ ಕಲಾ ಕೇಂದ್ರ, ಓಂಕಾರ ನೃತ್ಯ ಸಾಧನಾ ಕೇಂದ್ರ, ಪುಟ್ಟರಾಜ ಸಂಗೀತ ಸೇವಾ ಸಮೀತಿ, ಸಂಗಮೇಶ್ವರ ಮಹಿಳಾ ಮಂಡಳ ಅಲ್ಲದೇ ಕಲಬುರಗಿಯ ಅನೇಕ ಹಿರಿಯ-ಕಿರಿಯ ಸಂಗೀತಗಾರರು ಸಂಗೀತಾಸಕ್ತರು ಸಂತಾಪನ್ನು ಸೂಚಿಸಿದ್ದಾರೆ.