ಖ್ಯಾತ ಯೋಗ ಪಟು ಆದಿತ್ಯ ಬೆಳ್ಳಾರೆ ಕೊರೋನಾಗೆ ಬಲಿ

ಸುಳ್ಯ, ಮೇ ೨೭- ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ, ಹೆಸರಾಂತ ಯೋಗಪಟು, ಅಂತಾರಾಷ್ಟ್ರೀಯ ಯೋಗಾ ತೀರ್ಪುಗಾರ ಆದಿತ್ಯ ಬೆಳ್ಳಾರೆ (೫೨) ಬುಧವಾರ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ , ಓರ್ವ ಪುತ್ರ ಮತ್ತು ಪುತ್ರಿ ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ. ಕೆಲದಿನಗಳ ಹಿಂದೆ ಅಸೌಖ್ಯಕ್ಕೊಳಗಾದ ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ನಿಧನರಾದರು. ಅತ್ಯುತ್ತಮ ಯೋಗಪಟುವಾಗಿದ್ದ ಅವರು ಅನೇಕ ಕಡೆ ಪ್ರದರ್ಶನ ನೀಡಿದ್ದರು.ದೇಶ ವಿದೇಶಗಳಲ್ಲಿ ಯೋಗಾ ತೀರ್ಪುಗಾರರಾಗಿ ಭಾಗವಹಿಸಿದ್ದರು. ನೂರಾರು ಮಂದಿಗೆ ಯೋಗ ಕಲಿಸಿದ್ದರು. ಈ ಸಾಧನೆಗಾಗಿ ಹಲವೆಡೆ ಸನ್ಮಾನಿತರಾಗಿದ್ದರು.