ಖ್ಯಾತ ಮಾಡೆಲ್ ಆದಿತ್ಯ ಸಿಂಗ್ ಶವ ಶಂಕಾಸ್ಪದ ಪತ್ತೆ

ಮುಂಬಯಿ,ಮೇ.22-ನಟ, ಮಾಡೆಲ್ ಆದಿತ್ಯ ಸಿಂಗ್ ಅವರು ನಗರದ ತಮ್ಮ ನಿವಾಸದಲ್ಲಿ ಶಂಕಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ಸುಮಾರು 32 ವರ್ಷದ ಆದಿತ್ಯ ಸಿಂಗ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಮಾಡೆಲ್ ಲೋಕದಲ್ಲಿ ಜನಪ್ರಿಯತೆ ಗಳಿಸಿದ್ದ ಆದಿತ್ಯ ಸಿಂಗ್ ನಿಧನರಾಗಿದ್ದಾರೆ. ಆದಿತ್ಯ ಸಿಂಗ್ ಶವ ಮುಂಬೈನ ಅಂಧೇರಿಯ ಅವರ ಅಪಾರ್ಟ್​ಮೆಂಟ್​ನ ಬಾತ್​ರೂಂನಲ್ಲಿ ಪತ್ತೆಯಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆದಿತ್ಯ ಸಿಂಗ್ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯ ಬಳಿಕವೇ ಸಾವಿಗೆ ಕಾರಣ ತಿಳಿಯಲಿದೆ.
ಆದಿತ್ಯ ಸಿಂಗ್ ಶವವನ್ನು ಮೊದಲು ಅವರ ಗೆಳೆಯ ನೋಡಿದ್ದಾರೆ. ಗೆಳೆಯ ಹಾಗೂ ಅಪಾರ್ಟ್​ಮೆಂಟ್​ನ ವಾಚ್​ಮ್ಯಾನ್ ಸೇರಿಕೊಂಡು ಆದಿತ್ಯ ಸಿಂಗ್​ ಅನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರಾದರೂ ಅಲ್ಲಿ ಅವರು ನಿಧನರಾಗಿದ್ದಾಗಿ ಘೋಷಿಸಲಾಗಿದೆ. ಓಷಿವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.
ಆದಿತ್ಯ ಸಿಂಗ್, ಮಾದಕ ವಸ್ತು ಸೇವಿಸುತ್ತಿದ್ದು ಅತಿಯಾದ ಮಾದಕ ಸೇವನೆಯಿಂದ ನಿಧನ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಮರಣೋತ್ತರ ಪರೀಕ್ಷೆ ಹಾಗೂ ಹೆಚ್ಚಿನ ತನಿಖೆ ಬಳಿಕವಷ್ಟೆ ನಿಜಾಂಶ ಹೊರಗೆ ಬರಲಿದೆ.
ಆದಿತ್ಯ ಸಿಂಗ್ ರಜಪೂತ್ 17 ನೇ ವಯಸ್ಸಿನಲ್ಲಿ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದರು. ಅವರು ಮಾಡೆಲ್, ನಟ ಮತ್ತು ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದೆಹಲಿಯಲ್ಲಿ ಹುಟ್ಟಿ ಬೆಳೆದ ಅವರು ಉತ್ತರಾಖಂಡದ ಮೂಲದವರು. ದೆಹಲಿಯ ಗ್ರೀನ್ ಫೀಲ್ಡ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದ ಆದಿತ್ಯ, ಓದುವಾಗಲೆ ನಟನೆಗೆ ಕಾಲಿಟ್ಟರು. ರ್ಯಾಂಪ್ ಮಾಡೆಲ್ ಆಗಿಯೂ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಆದಿತ್ಯ ಸಿಂಗ್, ಕ್ರಾಂತಿವೀರ್ ಮತ್ತು ಮೈನೆ ಗಾಂಧಿ ಕೋ ನಹಿಂ ಮಾರಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿ ರಿಯಾಲಿಟಿ ಶೋಗಳ ಜೊತೆಗೆ, ಆದಿತ್ಯ ಸಿಂಗ್ 125 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅವರು ಜನಪ್ರಿಯ ಸ್ಪಿಟ್​ವಿಲ್ಲಾ ರಿಯಾಲಿಟಿ ಶೋನ ಒಂಬತ್ತನೇ ಸೀಸನ್​ನಲ್ಲಿ ಸಹ ಭಾಗವಹಿಸಿದರು. ಅವರು ಲವ್, ಆಶಿಕಿ, ಕೋಡ್ ರೆಡ್, ಆವಾಜ್ ಸೀಸನ್ 9, ಬ್ಯಾಡ್ ಬಾಯ್ ಸೀಸನ್ 4, ಮತ್ತು ಇತರ ಟಿವಿ ರಿಯಾಲಿಟಿ ಶೋಗಳ ಭಾಗವಾಗಿದ್ದರು.
ಇದು ಮಾತ್ರವೇ ಅಲ್ಲದೆ ವಿವಿಧ ಸಿನಿಮಾ ಹಾಗೂ ಧಾರಾವಾಹಿಗಳಿಗೆ ಕಾಸ್ಟಿಂಗ್ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದರು. ಆದಿತ್ಯ ಸಿಂಗ್ ನಿಧನಕ್ಕೆ ಕೆಲವು ಮಾಡೆಲ್ ಹಾಗೂ ಟಿವಿ ನಟರು ಸಂತಾಪ ವ್ಯಕ್ತಪಡಿಸಿದ್ದಾರೆ.