ಖ್ಯಾತ ಕೊರಿಯೊಗ್ರಾಫರ್ ಚೈತನ್ಯ ಆತ್ಮಹತ್ಯೆ

ಹೈದರಾಬಾದ್ ,ಮೇ.೧- ಸಾಲದ ಭಾಧೆಯಿಂದ ನೊಂದ ತೆಲುಗಿನ ಜನಪ್ರಿಯ ನೃತ್ಯ ನಿರ್ದೇಶಕ (ಕೊರಿಯೊಗ್ರಾಫರ್) ಚೈತನ್ಯ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು ಟಾಲಿವುಡ್ ಕಿರುತೆರೆಗೆ ದೊಡ್ಡ ಆಘಾತ ನೀಡಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ತೆಲುಗು ನೃತ್ಯ ಕಾರ್ಯಕ್ರಮವಾ ಧೀನಲ್ಲಿ ಕೊರಿಯೊಗ್ರಾಫರ್ ಆಗಿ ಫೇಮ್ ನೇಮ್ ಪಡೆದುಕೊಂಡಿದ್ದ ಚೈತನ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.
ತನ್ನ ಕೊರಿಯೊಗ್ರಾಫಿ ಮೂಲಕ ಅಪಾರ ಅಭಿಮಾನಿ ಹಾಗೂ ಟಾಲಿವುಡ್ ಸಿನಿಮಾರಂಗಕ್ಕೂ ಚಿರಪರಿಚಿತರಾಗಿದ್ದ ಅವರು ನಿನ್ನೆ ನೆಲ್ಲೂರಿನ ಹೊಟೇಲ್ ವೊಂದರಲ್ಲಿ ಇದ್ದು ಇನ್ಸ್ಟಾಗ್ರಾಮ್ ಲೈವ್ ಬಂದಿದ್ದಾರೆ.
ಈ ವೇಳೆ ಅವರು ತಾವು ಕಷ್ಟದ ಬಗ್ಗೆ ಮಾತನಾಡಿದ್ದಾರೆ. “ನನ್ನ ಅಪ್ಪ, ಅಮ್ಮ, ಸಹೋದರಿ ನನಗೆ ಯಾವುದೇ ಕಷ್ಟಬಾರದಂತೆ ನೋಡಿಕೊಂಡಿದ್ದಾರೆ. ನಾನು ನನ್ನೆಲ್ಲಾ ಸ್ನೇಹಿತರಲ್ಲಿ ಕ್ಷಮೆ ಕೋರುತ್ತೇನೆ. ನಾನು ಅನೇಕ ಜನರಿಗೆ ತೊಂದರೆ ನೀಡಿದ್ದೇನೆ ಮತ್ತು ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ. ಹಣದ ವಿಷಯದಲ್ಲಿ ನಾನು ನನ್ನ ಒಳ್ಳೆಯತನವನ್ನು ಕಳೆದುಕೊಂಡೆ. ಕೇವಲ ಸಾಲ ತೆಗೆದುಕೊಳ್ಳುವುದಲ್ಲ, ಅದನ್ನು ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿರಬೇಕು. ಆದರೆ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಾನೀಗ ನಲ್ಲೂರಿನಲ್ಲಿದ್ದೇನೆ. ಇದು ನನ್ನ ಕೊನೆಯ ದಿನ. ಇನ್ನು ನಾನು ನನ್ನ ಸಾಲಗಳಿಂದ ಬರುವ ಸಮಸ್ಯೆಗಳನ್ನು ಎದುರಿಸಲು ಆಗುವುದಿಲ್ಲ” ಎಂದಿದ್ದಾರೆ.
ಲೈವ್ ಮುಗಿಸಿದ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಎಲ್ಲದಕ್ಕೂ ಸಾವೊಂದೇ ಪರಿಹಾರ ಅಲ್ಲ, ಈ ನಿರ್ಧಾರ ಸರಿಯಲ್ಲ ಎಂದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಸಾಕಷ್ಟು ಸಾಲ ಮಾಡಿಕೊಂಡಿದ್ದ ಚೈತನ್ಯ ಅದನ್ನು ತೀರಿಸಲಾಗದೆ ಹಲವು ದಿನಗಳಿಂದ ಮನನೊಂದಿದ್ದರು ಎನ್ನಲಾಗುತ್ತಿದೆ. ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಅವರು ಈ ಸಾವಿಗೆ ಸಾಲವೇ ಕಾರಣವೆಂದು ಹೇಳಿದ್ದಾರೆ.
ತೆಲುಗಿನ ಜನಪ್ರಿಯ ಡ್ಯಾನ್ಸ್ ಶೋ ‘ಧೀ’ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಅವರು, ಪ್ರಭುದೇವ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡಿದ್ದಾರೆ. ಅಲ್ಲದೇ, ಅನೇಕ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. ಚೈತನ್ಯ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.