ಖೋ ಖೋ ಸ್ಪರ್ಧೆ: ರಾಜ್ಯಕ್ಕೆ ಎರಡನೇ ಸ್ಥಾನ

ಕೆ.ಆರ್.ಪುರ, ಫೆ.೭- ಜಾರ್ಖಂಡ್ ನಲ್ಲಿ ನಡೆದ ೬೭ನೇ ರಾಷ್ಟ್ರೀಯ ಶಾಲಾ ಕ್ರೀಡಾ ಕೂಟದ ಖೋಖೋ ಸ್ವರ್ದೆಯಲ್ಲಿ ಮಹದೇವಪುರ ಕ್ಷೇತ್ರದ ಗುಂಜೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ದ್ವಿತೀಯ ರನ್ನರ್ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಜಾರ್ಖಂಡ್‌ನ ರಾಂಚಿಯಲ್ಲಿ ಆಯೋಜಿಸಿದ ೬೭ನೇ ರಾಷ್ಟ್ರೀಯ ಶಾಲಾ ಕ್ರೀಡಾ ಕೂಟದ ಖೋಖೋ ಸ್ವರ್ದೆಯಲ್ಲಿ ಹರಿಯಾಣ ರಾಜ್ಯದ ಶಾಲಾ ಮಕ್ಕಳ ತಂಡದೊಂದಿಗೆ ನೇರ ಸೆಣಸಿ ದ್ವಿತೀಯ ರನ್ನರ್ ಸ್ಥಾನ ಪಡೆಯುವುದರೋಂದಿಗೆ ಮುಂದಿನ ವರ್ಷ ನಡೆಯುವ ಕೇಲೊ ಇಂಡಿಯಾ ಕ್ರೀಡಾ ಕೂಟಕ್ಕೆ ಅರ್ಹರಾಗಿದ್ದಾರೆ ಎಂದು ರಾಜ್ಯ ಖೋ ಖೋ ಅಸೋಸಿಯೇಷನ್ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಕೆ.ಆರ್ .ಜಯರಾಮ್ ತಿಳಿಸಿದರು.
ಶಾಲಾ ಕ್ರೀಡಾ ಕೂಟದಲ್ಲಿ ದೇಶದ ಎಲ್ಲಾ ರಾಜ್ಯಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ತಂಡಗಳು ಭಾಗವಹಿಸಿದ್ದವು.
ರಾಷ್ಟ್ರ ಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿದ ಸರಕಾರಿ ಶಾಲಾ ಮಕ್ಕಳನ್ನು ಗುಂಜೂರು ಗ್ರಾಮದ ನಾಗರೀಕರು ಹಾಗೂ ಶಾಲಾ ಆಡಳಿತ ಮಂಡಳಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿ ಅಭಿನಂದಿಸುವ ಮೂಲಕ ಪ್ರೋತ್ಸಾಹಿಸಿದರು.
ಇದೇ ವೇಳೆ ಕ್ಷೇತ್ರಶಿಕ್ಷಣಾಧಿಕಾರಿ ರಾಮಮೂರ್ತಿ ಮಾತನಾಡಿ, ಗುಂಜೂರು ಸರ್ಕಾರಿ ಶಾಲೆಯ ಬಾಲಕಿಯರು ಖೋ ಖೋ ಕ್ರೀಡೆಯಲ್ಲಿ ರಾಜ್ಯಕ್ಕೆ ಗೌರವ ತಂದಿದ್ದು, ಕ್ರೀಡೆಯಲ್ಲಿ ಪಾಲ್ಗೊಂಡ ವಿಧ್ಯಾರ್ಥಿಗಳಿಗೆ ಕ್ರೀಡಾ ಹಾಗೂ ಶಿಕ್ಷಣ ಇಲಾಖೆಯಿಂದ ದೊರೆಯಾಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಖೋಖೋ ಅಸೋಸಿಯೇಷನ್ ನಗರ ಜಿಲ್ಲಾ ಉಪಾಧ್ಯಕ್ಷ ಕೆ.ಆರ್ .ಜಯರಾಮ್, ಸಿಆರ್ ಪಿ ಗೋವಿಂದಪ್ಪ, ದೈಹಿಕ ಶಿಕ್ಷಕಿ ಲಕ್ಷ್ಮಿ ದೇವಮ್ಮ ಮತ್ತಿತರರು ಹಾಜರಿದ್ದರು.