ಖೋ ಖೋ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಹ್ಯಾಳ್ಯಾ ಶಾಲೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಆ.18: ಹ್ಯಾಳ್ಯಾ ವಲಯ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟಕ್ಕೆ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್ ಚಾಲನೆ ನೀಡಿದರು.
ಈ ಕ್ರೀಡಾಕೂಟವನ್ನು  ಕಂದಗಲ್ಲು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವತಿಯಿಂದ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕ್ರೀಡಾಕೂಟದಲ್ಲಿ ಏಳು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಖೋ ಖೋ, ವಾಲಿಬಾಲ್, ಥ್ರೋ ಬಾಲ್, ಕಬ್ಬಡ್ಡಿ, ಇನ್ನು ಮುಂತಾದ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬಾಲಕ ಮತ್ತು ಬಾಲಕಿಯರ ವಿಭಾಗದ ಖೋ ಖೋ ಫೈನಲ್ ಪಂದ್ಯದಲ್ಲಿ  ರಾಂಪುರ ಗ್ರಾಮದ ಬಸವೇಶ್ವರ ಶಾಲೆ ಮತ್ತು ಹ್ಯಾಳ್ಯಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಖ ಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹ್ಯಾಳ್ಯಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಪ್ರಥಮ ಸ್ಥಾನ ಪಡೆದು ಗೆಲುವನ್ನು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರೆ, ಬಾಲಕಿಯರ ವಿಭಾಗದ ಕಬ್ಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ರಾಂಪುರ ಗ್ರಾಮದ ಬಸವೇಶ್ವರ ಪ್ರೌಢ ಶಾಲೆಯು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಯಿತು.
ಈ ಸಂದರ್ಭದಲ್ಲಿ ವಲಯ ಮಟ್ಟದ ಸಂಚಾಲಕರಾದ ಕೆ. ಎಸ್. ನಾಗರಾಜ್ ನಾಯ್ಕ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಎಸ್. ವಿ ಮಂಜುನಾಥ್ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ  ಸಿದ್ದಪ್ಪ ದೂಪದಹಳ್ಳಿ ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.