ಚಿಕ್ಕಬಳ್ಳಾಪುರ: ನಗರದ ಹೊರವಲಯದ ಕೆ.ವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ, ಚಿಕ್ಕಬಳ್ಳಾಪುರ ಜಿಲ್ಲಾ ಖೋ ಖೋ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆಯನ್ನು ಶಿಬಿರಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಖೋ ಖೋ ಸಂಸ್ಥೆ ಅಧ್ಯಕ್ಷರಾದ ಎಸ್‍ಆರ್‍ಎಸ್ ಡಾ.ವಿ.ದೇವರಾಜ್ ಮಾತನಾಡಿ, ಗ್ರಾಮೀಣ ಕ್ರೀಡೆಯಾಗಿರುವ ಖೋ ಖೋ ಕ್ರೀಡೆಯನ್ನು ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದ್ದು, ಈ ಕ್ರೀಡೆಗೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಖೋಖೋ ಅಸೋಶಿಯೇಷನ್ ಸಂಸ್ಥೆಗೆ ಸರ್ಕಾರ ಸೂಕ್ತ ಸವಲತ್ತುಗಳು ಸಿಗದಿರುವುದು ಬೇಸರದ ಸಂಗತಿಯಾಗಿದೆ. ಇದರಿಂದ ಖೋ ಖೋ ಕ್ರೀಡೆ ಜನಪ್ರಿಯತೆಯಲ್ಲಿ ಹಿಂದೆ ಉಳಿಯುವಂತಾಗಿದೆ. ಖೋ ಖೋ ಕ್ರೀಡೆಯನ್ನು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಂಸ್ಥೆಯ ರಾಜ್ಯ ಮಟ್ಟದ ಪದಾಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರಕ್ಕೆ ಮನವಿ: ಕ್ರೀಡೆಗಳು ಜೀವನದ ಒಂದು ಭಾಗವಾಗಿವೆ. ದೈಹಿಕ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಹೆಚ್ಚು ಸಹಕಾರಿಯಾಗಿವೆ. ಗ್ರಾಮೀಣ ಕ್ರೀಡೆಯಾಗಿರುವ ಖೋಖೋ ಕ್ರೀಡೆಯನ್ನು ಬೆಳೆಸಲು ವಿವಿಧ ಸವಲತ್ತುಗಳನ್ನು ಕಲ್ಪಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಇಡೀ ವಿಶ್ವವೇ ಭಾರತ ದೇಶದ ಕ್ರೀಡೆಗಳನ್ನು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೇಶಿಯ ಖೋ ಖೋ ಕ್ರೀಡೆಗೆ ಹೆಚ್ಚು ಜನಪ್ರಿಯತೆ ಸಿಗಬೇಕಿದೆ. ಈ ಹಿಂದೆ ಜಿಲ್ಲೆಯಲ್ಲಿ ಖೋಖೋ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಖೋಖೋ ಕ್ರೀಡಾಪಟುಗಳನ್ನು ಸಂಘಟಿಸಲಾಗುತ್ತಿದೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿನ ಖೋಖೋ ಕ್ರೀಡಾಪಟುಗಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇವರು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಇನ್ನೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖೋಖೋ ಕ್ರೀಡೆಯನ್ನು ಉಳಿಸಿ ಬೆಳೆಸಲು ಖೋಖೋ ಅಸೋಶಿಯೇಷನ್ ಸಂಸ್ಥೆಯಿಂದ ರಾಜ್ಯಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆಯನ್ನು ಶಿಬಿರಾರ್ಥಿಗಳಿಗೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ 170 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆ ಹಾಗೂ ವಿವಿಧ ಮಾನದಂಡಗಳ ಮುಖಾಂತರ ಉತ್ತಮ ಖೋಖೋ ತೀರ್ಪುಗಾರರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ಸಂಸ್ಥೆ ಕಡೆಯಿಂದ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆವಿ ಟ್ರಸ್ಟ್ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್, ಕಾರ್ಯದರ್ಶಿಗಳು ಆರ್.ಮಲ್ಲಿಕಾರ್ಜುನ, ತೀರ್ಪುಗಾರರ ಮಂಡಳಿಯ ಚೇರಮನ್ ಬಸವರಾಜ್ ಚಿಲಿಕಾನ್, ಚಂದ್ರಶೇಖರ್ ಭಟ್, ಜಿಲ್ಲಾ ಖೋಖೋ ಸಂಸ್ಥೆಯ ಉಪಾಧ್ಯಕ್ಷ ಡಿ.ವಿ.ಮುನಿರಾಜು, ಕಾರ್ಯದರ್ಶಿ ಎಂ.ವಿ.ಗುರುರಾಜ್, ಶಿಬಿರಾರ್ಥಿಗಳು ಹಾಜರಿದ್ದರು.