ಖೋಟಾನೋಟು ಮುದ್ರಿಸಿ ಚಲಾವಣೆ ಮೂವರು ಸೆರೆ

ಬೆಂಗಳೂರು,ಡಿ.26- ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಕೇಂದ್ರ ವಿಭಾಗದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಜಮಾಲ್, ಇಮ್ರಾನ್, ಮುಬಾರಕ್ ಎಂದು ಗುರುತಿಸಲಾಗಿದೆ. ಲಾಕ್ ಡೌನ್ ವೇಳೆಯೇ ಖೋಟಾನೋಟುಗಳನ್ನು ಮುದ್ರಣ ಆರಂಭಿಸಿದ್ದ ಆರೋಪಿಗಳು, ಬಳಿಕ ಚಲಾವಣೆ ಆರಂಭಿಸಿದ್ದರು.


ಆಟೋ ಚಾಲಕರೊಬ್ಬರಿಗೆ ಜಮಾಲ್ 100 ರೂ. ಖೋಟಾನೋಟು ನೀಡಿದ್ದ. ಅನುಮಾನಗೊಂಡ ಆಟೋ ಚಾಲಕ ಅದನ್ನು ವಿಲ್ಸನ್ ಗಾರ್ಡನ್ ಠಾಣೆಗೆ ತೆಗೆದುಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದ.


ಆಟೋಚಾಲಕನ ಮಾಹಿತಿ ಆಧರಿಸಿ ಜಮಾಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಖೋಟಾನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು, ಪ್ರಿಂಟರ್ ಮೂಲಕ 100 ರೂ ಮುಖಬೆಲೆಯ ಖೋಟಾನೋಟು ಮುದ್ರಿಸುತ್ತಿದ್ದ 20 ಶೀಟ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.