ಖೋಟಾನೋಟು ಜಾಲ ಮೂವರ ಸೆರೆ

ಬೆಂಗಳೂರು, ಜ. ೬- ೨೦೦೦ ಹಾಗೂ ೫೦೦ ಮುಖಬೆಲೆಯ ಖೋಟಾನೋಟುಗಳನ್ನು ಮುದ್ರಿಸಿ ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಪೊಲೀಸರು ೧ ಕೋಟಿ ೨೮ ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಖೋಟಾನೋಟು ಜಾಲದಲ್ಲಿದ್ದ ತಮಿಳುನಾಡಿನ ತುತುಕುಡಿಯ ಪಿಚ್ಚಿಮುತ್ತು (೪೮) ತಿರುನಾಲ್ವೇಲಿಯ (೫೩) ಹಾಗೂ ಸುಬ್ರಮಣಿಯನ್ (೬೦) ಅವರನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಅರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
೨೦೦೦ ಮುಖಬೆಲೆಯ ೨೩೦೦ ನಕಲಿ ನೋಟು, ೫೦೦ ಮುಖಬೆಲೆಯ ೧೭೪ ನಕಲಿ ನೋಟುಗಳು, ಪ್ರಿಂಟರ್ ಹಾರ್ಡ್ ಡಿಸ್ಕ್, ಮೊಬೈಲ್‌ಗಳನ್ನು ವಶಕ್ಕೆ ಪಡೆದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.ಆರೋಪಿಗಳು ೨೦೦೦ ಹಾಗೂ ೫೦೦ ಮುಖಬೆಲೆಯ ಖೋಟಾನೋಟುಗಳನ್ನು ತಯಾರಿಸಿ ಅವುಗಳನ್ನು ಅಸಲಿ ನೋಟುಗಳೆಂದು ಬಿಂಬಿಸಿ ನಗರದಲ್ಲಿ ಚಲಾವಣೆ ಮಾಡುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಆರೋಪಿಗಳಾದ ಪಿಚ್ಚಿಮುತ್ತು ಹಾಗೂ ನಲ್ಲಕಣಿ ತಾವು ಫೈನಾಶಿಯರ್‌ಗಳೆಂದು ಮತ್ತೊಬ್ಬ ಆರೋಪಿ ಸುಬ್ರಮಣಿಯನ್ ಆಡಿಟರ್ ಎಂದು ಬಿಂಬಿಸಿಕೊಂಡು ಸಾಲ ಬೇಕಾಗಿರುವವರ ಬಳಿ ಮೂರ್ನಾಲ್ಕು ಬಾರಿ ವ್ಯವಹಾರ ಕುದುರಿಸುತ್ತಿದ್ದರು.

ಸಾಲ ಮಂಜೂರಾಗಿರುವಾದಾಗಿ ಅಗ್ರಿಮೆಂಟ್ ಮಾಡಿಸುವುದೆಂದು ಉಪ ನೊಂದಣಾಧಿಕಾರಿಗಳ ಜತೆಗೆ ಕರೆದುಕೊಂಡು ಹೋಗಿ ಅಲ್ಲಿ ಅಗ್ರಿಮೆಂಟ್ ಚಾರ್ಜ್ ಶೇ. ೧ ರಂತೆ ನಗದು ರೂಪದಲ್ಲಿ ಅವರಿಂದಲೇ ಪಡೆದು ಸಾಲ ಮಂಜೂರಾಗಿರುವ ಬಗ್ಗೆ ಒಂದು ಅಗ್ರಿಮೆಂಟ್ ಪತ್ರವನ್ನು ಮಾಡಿಸಿ ಜತೆಗೆ ಸಾಲ ಬೇಕೆಂದವರಿಗೆ ಈಗಗಲೇ ಕೈಸಾಲ ಪಡೆದುಕೊಂಡಿರುವುದಾಗಿ ಅಗ್ರಿಮೆಂಟ್ ಪತ್ರವನ್ನು ತಯಾರು ಮಾಡಿಟ್ಟುಕೊಳ್ಳುತ್ತಿದ್ದರು.ಬಳಿಕ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ೨ ಅಗ್ರಿಮೆಂಟ್ ಪತ್ರಗಳಿಗೆ ಸಹಿ ಮಾಡಿಸಿಕೊಂಡು ನಂತರದಲ್ಲಿ ಸಾಲ ಬೇಕೆಂದವರು ಸಾಲದ ಹಣಕ್ಕೆ ಒತ್ತಡ ಹಾಕಿದಾಗ ಆರೋಪಿಗಳು ಅವರಿಗೆ ಈಗಾಗಲೇ ಸಹಿ ಮಾಡಿಸಿಕೊಂಡಿದ್ದ ಅಗ್ರಿಮೆಂಟ್ ತೋರಿಸಿ ನೀವು ಈಗಾಗಲೇ ಸಾಲ ಪಡೆದುಕೊಂಡಿದ್ದೀರಾ ಎಂದು ಹೇಳಿ ಸಾಲ ಪಡೆದುಕೊಂಡ ಹಣವನ್ನು ವಾಪಾಸ್ ಕೊಡುವಂತೆ ಬೆದರಿಸಿ ಮೋಸ ಮಾಡುತ್ತಿದ್ದರೆಂದು ಶರಣಪ್ಪ ತಿಳಿಸಿದರು.ಸಿದ್ದಾಪುರದಲ್ಲಿ ನಡೆದ ವಂಚನೆ ಪ್ರಕರಣದ ಬೆನ್ನತ್ತಿ ಆರೋಪಿಗಳ ಜಾಲವನ್ನು ಭೇಧಿಸುವಲ್ಲಿ ಸಿಸಿಬಿ ಪೊಲೀಸರು ಯಶ್ವಸಿಯಾಗಿದ್ದು, ಜಾಲದ ವಂಚನೆ ಪ್ರಕರಣಗಳ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.