ಖೇಲೋ ಇಂಡಿಯಾ ಕೇಂದ್ರಗಳ ಮಂಜೂರಾತಿಗೆ ಬಿಎಸ್‌ಪಿ ಒತ್ತಾಯ


ಮಾನ್ವಿ.ಜೂ.೦೧-ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅತಿ ಹಿಂದುಳಿದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಖೇಲೋ ಇಂಡಿಯಾ ಕೇಂದ್ರಗಳ ಮಂಜೂರಾತಿ ಮಾಡಲು ರಾಜಾ ಅಮರೇಶ್ವರ ನಾಯಕ್ ಲೋಕಸಭಾ ಸದಸ್ಯರಿಗೆ ತಹಸೀಲ್ದಾರ್ ಮುಖಾಂತರ ಬಹುಜನ ಸಮಾಜ ಪಕ್ಷ ಮನವಿ ಮೂಲಕ ಒತ್ತಾಯಿಸಿತ್ತು.
ಕೇಂದ್ರ ಸರಕಾರವು ಏಳು ರಾಜ್ಯಗಳಿಗೆ ೧೪೩ ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ರು.೧೪.೩೦ ಕೋಟಿ ಅನುದಾನವನ್ನು ವೆಚ್ಚ ಮಾಡುತ್ತಿದ್ದು,ಕರ್ನಾಟಕ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ ಮುಂತಾದ ಏಳು ರಾಜ್ಯಗಳಲ್ಲಿ ತಳಮಟ್ಟದಿಂದ ಕ್ರೀಡೆಯನ್ನು ಬಲಪಡಿಸಲು ಹಾಗೂ ಒಂದು ಕ್ರೀಡೆಯಲ್ಲಿ ವಿಶೇಷವಾಗಿ ತರಬೇತಿಯನ್ನು ನೀಡಲು ನಿರ್ಧರಿಸಿದ್ದು ಸ್ವಾಗತಾರ್ಹ.
ಜಿಲ್ಲಾ ಮಟ್ಟದ ಖೇಲೋ ಇಂಡಿಯಾ ಕೇಂದ್ರಗಳಲ್ಲಿ ಸಮರ್ಥ ಕೋಚ್ ಗಳು ಮತ್ತು ಉತ್ತಮ ಸೌಲಭ್ಯಗಳು ಲಭ್ಯವಾದರೆ ಪ್ರತಿಭೆಗಳು ಹೊರ ಬರಲಿವೆ ದೇಶದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಕೇಂದ್ರವನ್ನಾದರೂ ಸ್ಥಾಪಿಸುವ ಉದ್ದೇಶದೊಂದಿಗೆ ಸರ್ಕಾರವು ೪ವರ್ಷಗಳಲ್ಲಿ ೧ಸಾವಿರ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ ಈಗಾಗಲೇ ಎರಡು ನೂರ ಹದಿನೇಳು ಕೇಂದ್ರಗಳನ್ನು ಆರಂಭಿಸಲಾಗಿದ್ದು ಮಹಾರಾಷ್ಟ್ರದ ೩೦ ಜಿಲ್ಲೆಗಳಲ್ಲಿ ೩೬ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಅದರಂತೆಯೇ ಕರ್ನಾಟಕ ರಾಜ್ಯಕ್ಕೆ ೩೧ ಜಿಲ್ಲಾ ಕೇಂದ್ರಗಳ ಆರಂಭಕ್ಕಾಗಿ ೩.೧೦ ಕೋಟಿ ಅನುದಾನವನ್ನು ನೀಡಲಾಗಿದೆ.ಕರ್ನಾಟಕ ರಾಜ್ಯದಲ್ಲಿ ಚುನಾಯಿತ ಆಡಳಿತ ಪಕ್ಷದ ಹೆಚ್ಚಿನ ಸಂಸದರಿದ್ದು ರಾಯಚೂರು ಲೋಕಸಭಾ ಕ್ಷೇತ್ರವು ಆಡಳಿತರೂಢ ಪಕ್ಷದ ಸಂಸದರಾಗಿರುವುದರಿಂದ ರಾಜ್ಯದ ಕ್ರೀಡೆಯಲ್ಲಿ ಅತಿ ಹಿಂದುಳಿದಿರುವ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಕ್ರೀಡೆಗಳ ಬಗ್ಗೆ ಪ್ರತಿಭೆಯನ್ನು ಹೊರತರಬೇಕಾದರೆ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಇರುವ ಯುವಕರನ್ನು ಗುರುತಿಸಲು ಸಮಗ್ರ ಕ್ರೀಡಾ ಪರಿಕರಗಳನ್ನು ಹಾಗೂ ಕೋಚ್ ಗಳ ಸೌಲಭ್ಯವನ್ನು ನೀಡುತ್ತಿರುವ ಕೇಂದ್ರ ಸರಕಾರದ ಅನುದಾನಿತ ಖೇಲೋ ಇಂಡಿಯಾ ಕೇಂದ್ರಗಳನ್ನು ಮಂಜೂರು ಮಾಡಿಸಲು ರಾಯಚೂರು ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ್ ಅವರಿಗೆ ಬಹುಜನ ಸಮಾಜ ಪಕ್ಷವು ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಿತ್ತು.
ಈ ಸಂದರ್ಭದಲ್ಲಿ ರಾಯಚೂರು ಲೋಕಸಭೆ ಉಸ್ತುವಾರಿಗಳಾದ ಶ್ಯಾಮಸುಂದರ್ ಕುಂಬ್ದಾಳ, ಹನುಮಂತರಾಯ ಕಪಗಲ್, ಚನ್ನಬಸವ ಜಗ್ಲಿ, ಇಮಾಮ್ ಸಾಬ್,ಚಂದ್ರಶೇಖರ್ ಬಿ, ರಮೇಶ್ ನಾಯಕ್, ವಿರುಪಾಕ್ಷಿಗೌಡ ಕೋನಾಪುರಪೇಟೆ ಉಪಸ್ಥಿತರಿದ್ದರು