ಖೂಬಾ ಅವರಿಗೆ ಲಂಚ ಕೊಟ್ಟು ತಗಂಡು ಅಭ್ಯಾಸವೇ ಹೊರತು ನನಗಲ್ಲಕಾಮಲೆ ಕಣ್ಣಿಗೆ ಕಂಡಿದ್ದೆಲ್ಲ ಹಳದಿ

ಭಾಲ್ಕಿ:ಮಾ.14: ಬೇನಾಮಿ ಹೆಸರಲ್ಲಿ ರೈಲ್ವೆ ಗುತ್ತಿಗೆ ಪಡೆದು, ಯಾವುದೇ ಗುತ್ತಿಗೆ ಪೂರ್ಣಗೊಳಿಸದ ಕುಖ್ಯಾತಿ ಹೊಂದಿರುವ ಭಗವಂತ ಖೂಬಾ ಅವರಿಗೆ ಲಂಚ ಕೊಡುವ ಮತ್ತು ತೆಗೆದುಕೊಳ್ಳುವ ಪರಿಣತಿ ಇರಬಹುದೇ ಹೊರತು ಆ ಅಭ್ಯಾಸ ತಮಗಿಲ್ಲ ಎಂದು ಮಾಜಿ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿ ಎಂಬಂತೆ ಪಾಪ ಭಗವಂತ ಖೂಬಾ ಅವರು ತಮ್ಮಂತೆಯೇ ಎಲ್ಲರೂ ಲಂಚ ಪಡೆಯುತ್ತಾರೆ ಎಂದುಕೊಂಡು ಸತ್ಯಾ ಸತ್ಯತೆ ಇಲ್ಲದೆ, ದಾಖಲೆ ಇಲ್ಲದೆ 5 ವರ್ಷದ ಹಿಂದೆ ನಡೆದಿದೆ ಎಂಬ ಕಪೆÇೀಲಕಲ್ಪಿತ ಕಟ್ಟು ಕಥೆಯ ಆರೋಪ ಮಾಡುತ್ತಿರುವ ಅವರ ಬಗ್ಗೆ ತಮಗೆ ಕನಿಕರ ಮೂಡುತ್ತದೆ ಎಂದು ಮರುಕ ವ್ಯಕ್ತಪಡಿಸಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ತಮ್ಮ ಬಂಧು ಮಿತ್ರರು, ನೆಂಟರು ಇಷ್ಟರಿಗೆಲ್ಲಾ ಗುತ್ತಿಗೆ ಕೊಡಿಸಿ ಕಮಿಷನ್ ಹೊಡೆಯುತ್ತಿರುವ ಖೂಬಾಗೆ ಪರಿಶುದ್ಧ, ಪ್ರಾಮಾಣಿಕತೆಯಿಂದ ಸಚಿವ ಸ್ಥಾನ ನಿಭಾಯಿಸಿದ ತಮ್ಮ ಮೇಲೆ ಆರೋಪ ಮಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿಳಿಸಿದ್ದಾರೆ.

ಮಾತೆತ್ತಿದರೆ ಡಬಲ್ ಎಂಜಿನ್ ಸರಕಾರ ಎನ್ನುತ್ತಾರೆ. ಮೂರು ವರ್ಷದಿಂದ ಇವರ ಸರಕಾರವೇ ಇತ್ತಲ್ಲ ಏಕೆ ತನಿಖೆ ಮಾಡಿಸಲಿಲ್ಲ.

ನಾನು ಅಮೃತ ಯೋಜನೆಯಡಿ ಜನವಾಡಾ ಕುಡಿಯುವ ನೀರು ಯೋಜನೆ ರದ್ದು ಮಾಡಿದ್ದಾಗಿ ಆರೋಪ ಮಾಡಿದ್ದಾರೆ. ಆದರೆ ನಾನು ಸಚಿವನಾಗಿದ್ದಾಗ ಅಧಿಕಾರಿಗಳು, ಕಾರಂಜಾದಿಂದ 42 ಎಂಎಲ್‍ಡಿ ನೀರು ಪ್ರತಿದಿನ ಲಭ್ಯವಾಗುತ್ತಿದ್ದು, ಅದು ಮುಂದಿನ 5 ವರ್ಷಗಳಿಗೆ ಸಾಕಾಗುತ್ತದೆ ಈಗ ಇದರ ಅವಶ್ಯಕತೆ ಸಧ್ಯಕ್ಕಿಲ್ಲ. ಹೀಗಾಗಿ ಈ ಅನುದಾನವನ್ನು ಬೀದರ್ ಒಳಚರಂಡಿ ಯೋಜನೆಗೆ ಬಳಸುವ ಸಲಹೆ ನೀಡಿದ ಹಿನ್ನೆಲೆಯಲ್ಲಿ ಅದಕ್ಕೆ, ಬಳಕೆ ಮಾಡಿದ್ದಾರೆ. ಆದರೆ ಈ ಯೋಜನೆ ಕಾರ್ಯಗತಗೊಳಿಸಲು ಗುತ್ತಿಗೆದಾರರ ಜೊತೆ ಶಾಮೀಲಾಗಿ ನಿಗದಿತ ಪ್ರಮಾಣದಲ್ಲಿ ನೀರು ಬಾರದಂತೆ ಮಾಡಿ, ಜನರು ನೀರಿಲ್ಲದೆ ಪರಿತಪಿಸುವಂತೆ ಮಾಡಿದ ಇವರಿಗೆ ಜನರ ಶಾಪ ತಟ್ಟದೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಜನಹಿತ ಮರೆತು ಕೇವಲ ಗುತ್ತಿಗೆದಾರರ ಹಿತಕಾಯಲು ಜನರಿಗೆ ನೀರು ಪೂರೈಕೆ ಆಗದಂತೆ ಮಾಡಿದ ಖೂಬಾ ತಮ್ಮ ತಪ್ಪು ಮುಚ್ಚಿಕೊಳ್ಳಲು ಅದೂ 5 ವರ್ಷಗಳ ನಂತರ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ.

ಶಾಸಕರ ಉತ್ತರದಾಯಿತ್ವದ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗೂ ತಾವೇ ಪ್ರಸ್ತಾವನೆ ಸಲ್ಲಿಸಿದ್ದಾಗಿ ತಿಳಿಸುತ್ತಾ ಎಲ್ಲ ಕಾಮಗಾರಿಯಲ್ಲೂ ಮೂಗು ತೂರಿಸುವುದು ನಾಚಿಕೆಗೇಡಿನ ಸಂಗತಿ. ಇದನ್ನು ಖಂಡಿಸುತ್ತೇನೆ.

ಈಗ ಗುತ್ತಿಗೆದಾರರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸುದ್ದಿಗೋಷ್ಠಿ ಮಾಡುತ್ತಾರೆ. ಅಂದರೆ ಇವರಿಗೂ ಗುತ್ತಿಗೆದಾರರಿಗೂ ಎಷ್ಟೊಂದು ಅವಿನಾಭಾವ ಸಂಬಂಧವಿದೆ ಎಂಬುದು ವೇದ್ಯವಾಗುತ್ತದೆ. ಅದೇ ಗುತ್ತಿಗೆದಾರರು ಈ ಹಿಂದೆ 50 ಕೋಟಿ ರೂ. ವರ್ತುಲರಸ್ತೆ ಕಾಮಗಾರಿ ನಡೆಸಿದ್ದರು. ಕಳೆದ 5 ವರ್ಷದಿಂದ ಅವರೇಕೆ ಬಾಯಿ ಮುಚ್ಚಿಕೊಂಡಿದ್ದರು. ಈಗ 15 ಕೋಟಿ ಕಾಮಗಾರಿಯನ್ನು 23 ಕೋಟಿ ರೂ. ಟೆಂಡರ್ ಮಾಡಿ ಅವರಿಗೇ ಕೊಟ್ಟಿದ್ದೀರಿ. ಹೀಗಾಗಿ ಗಿಣಿಪಾಠ (ಹೇಳಿಕೊಟ್ಟಂತೆ ಹೇಳುವ) ಒಪ್ಪಿಸುತ್ತಿದ್ದಾರೆ ಎಂದು ದೂರಿದ್ದಾರೆ. ಈ 23 ಕೋಟಿ ರೂ. ಟೆಂಡರ್ ಬಗ್ಗೆ ಮೊದಲು ತನಿಖೆಯಾಗಲೀ ಎಂದು ಒತ್ತಾಯಿಸಿದ್ದಾರೆ.

ಭಗವಂತ ಖೂಬಾ ಮತ್ತು ಅವರ ಆಪ್ತರ ಪರಿವಾರದವರೇ ನನ್ನ ಕ್ಷೇತ್ರ ಭಾಲ್ಕಿಯಲ್ಲೂ ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ನಡಸಿದ್ದಾರೆ. ಈಗಲೂ ನಡೆಸುತ್ತಿದ್ದಾರೆ, ನಾನು ಇವರಿಂದ ಲಂಚ ಪಡೆಯೋದು ಇರಲಿ ಅರ್ಧ ಕಪ್ ಚಹ ಕುಡಿದಿದ್ದೇನೆಯೇ ಎಂಬುದನ್ನು ಆತ್ಮಸಾಕ್ಷಿ ಮುಟ್ಟಿಕೊಂಡು ಹೇಳಲಿ ಎಂದು ಸವಾಲು ಹಾಕಿದ್ದಾರೆ.

ತಮ್ಮದು ಬಂದವರಿಗೆ ಕೈಯೆತ್ತಿ ನೀಡುವ ವಂಶವೇ ಹೊರತು ಬೇರೆಯವರ ಮುಂದೆ ಕೈಚಾಚುವ ವಂಶವಲ್ಲ. ಭಗವಂತ ತಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಅಧಿಕಾರ ಇದ್ದಾಗ ಜನ ಸೇವೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತಾವು ಸಚಿವರಾಗಿ ಒಂದೇ ಒಂದು ಕಳಂಕ ಇಲ್ಲದಂತೆ ಹುದ್ದೆ ನಿಭಾಯಿಸಿದ್ದು, ನನ್ನ ಕೈಲಾದ ಮಟ್ಟಿಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ಮಾಡುವ ಕನಸು ಕಂಡವರು ಹಿರೆಮಠದ ಶ್ರೀ ಚನ್ನಬಸವ ಪಟ್ಟದೇವರು ಅದನ್ನು ಸಾಕಾರಗೊಳಿಸಲು ಅವರಿಗೆ ಹೆಗಲಿಗೆ ಹೆಗಲು ಕೊಟ್ಟವರು ನನ್ನ ತಂದೆ ಪರಮಪೂಜ್ಯ ಶ್ರೀ ಭೀಮಣ್ಣ ಖಂಡ್ರೆ ಅವರು. ತಾವು ಸಚಿವರಾಗಿದ್ದಾಗ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ವಿನ್ಯಾಸ ಮಾಡಿಸಿ, ಬಜೆಟ್ ನಲ್ಲಿ ಘೋಷಣೆ ಮಾಡಿಸಿದ್ದು ಜಿಲ್ಲೆಯ ಎಲ್ಲರಿಗೂ ತಿಳಿದಿದೆ ಆದರೆ ಪಾಪ ಇವರಿಗೆ ತಿಳಿದಿಲ್ಲ ಎಂದು ಕುಟುಕಿದ್ದಾರೆ.

ದೇವಸ್ಥಾನ ಬಿಜೆಪಿ ಸ್ವತ್ತಲ್ಲ: ನಾವು ದೇವಾಲಯಗಳಿಗೆ ಹಣ ಕೊಡದಿದ್ದರೆ ಕಾಂಗ್ರೆಸಿಗರು ಮುಸ್ಲಿಂ ಪರ, ಅದಕ್ಕೇ ದೇವಾಲಯಕ್ಕೆ ಹಣ ಕೊಡಲ್ಲ ಅಂತ ಆರೋಪ ಮಾಡ್ತಾರೆ, ಹಣ ಕೊಟ್ಟರೆ ಈಗ ಏಕೆ ಹಣ ಕೊಡುತ್ತಿದ್ದೀರಿ ಎಂದು ಖೂಬಾ ರೀತಿ ಪ್ರಶ್ನಿಸುತ್ತಾರೆ. ದೇಶದಲ್ಲಿರುವ ದೇವಾಲಯಗಳೆಲ್ಲ ಬಿಜೆಪಿ ಜಾಹಗೀರ್ ಏನಲ್ಲ ಎಂದು ತಿಳಿಸಿದ್ದಾರೆ.

ಮಂತ್ರಿಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಅಪಲಾಪ:

ಪ್ರಧಾನಿ ಮೋದಿ ಸ್ವತಃ ಬಂದು ಹೋದರೂ ಕಲ್ಯಾಣ ಕರ್ನಾಟಕದಲ್ಲಿ ನಯಾಪೈಸೆ ಪ್ರಭಾವ ಬೀರಿಲ್ಲ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಹಾಲಿ ಇರುವ ಕ್ಷೇತ್ರದಲ್ಲೂ ಸೋಲನುಭವಿಸಲಿದ್ದು, ಕೇಂದ್ರದಲ್ಲಿ ಸಚಿವಸ್ಥಾನ ಮತ್ತು ಎಂ.ಪಿ. ಟಿಕೆಟ್ ಕೂಡ ಕೈತಪ್ಪುವ ಭೀತಿಯಿಂದ ಭಗವಂತ ಖೂಬಾ ತಮ್ಮ ವಿರುದ್ಧ ಇಲ್ಲ ಸಲ್ಲದ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಶರಣು ಸಲಗರ್ ಗೂ ಉತ್ತರ:

ಸ್ವಪಕ್ಷದ ಶಾಸಕರಿಂದಲೇ ಅವಾಚ್ಯ ಶಬ್ದಗಳಿಂದ ಬೈಸಿಕೊಂಡರೂ ಖೂಬಾರಿಗೆ ಬುದ್ಧಿ ಬಂದಿಲ್ಲ ಎಂದು ತಾವು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಲಗರ್ ನನ್ನ ಹೇಳಿಕೆ ನಿರಾಕರಿಸಿಲ್ಲ ಬದಲಾಗಿ ಪುಷ್ಟೀಕರಿಸಿದ್ದಾರೆ. ನನ್ನ ಹಾಗೂ ಕೇಂದ್ರ ಸಚಿವರ ನಡುವೆ ಏನೇ ನಡೆದಿದ್ದರೂ ಅದು ನಮ್ಮ ಆಂತರಿಕ ವಿಷಯ ಎಂದು ಹೇಳಿಕೆ ನೀಡುವ ಮೂಲಕ ತಾವು ಬೈದಿದ್ದು ನಿಜ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಖಂಡ್ರೆ ಹೇಳಿದ್ದಾರೆ.