ಖುಷ್ಬು ಹಳೆಯ ಟ್ವೀಟ್ ವೈರಲ್


ನವದೆಹಲಿ, ಮಾ. ೨೬- ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಅವರು ಮೋದಿ ಕುರಿತು ಮಾಡಿರುವ ಹಳೆಯ ಟ್ವೀಟ್‌ವೊಂದು ಇದೀಗ ವೈರಲ್ ಆಗಿದೆ.
ಮೋದಿ ಪದವನ್ನು “ಭ್ರಷ್ಟಾಚಾರ” ಎಂದು ಮರು ವ್ಯಾಖ್ಯಾನಿಸಬೇಕು ಎಂದು ಖುಷ್ಬು ಅವರು ೨೦೧೮ರಲ್ಲಿ ಟ್ವೀಟ್ಮಾಡಿದ್ದರು. ಇದೀಗ ಖುಷ್ಬು ಅವರ ಟ್ವೀಟ್‌ಅನ್ನು ಕಾಂಗ್ರೆಸ್ನ ಹಲವು ಪ್ರಮುಖರು ಹಂಚಿಕೊಂಡಿದ್ದಾರೆ. ಅಲ್ಲದೇವಖುಷ್ಬು ಸುಂದರ್ ವಿರುದ್ಧ ಗುಜರಾತ್ ಸಚಿವ ಪೂರ್ಣೇಶ್ ಮೋದಿ ಕೇಸ್ ಹಾಕುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಟ್ವೀಟ್ ಬಗ್ಗೆ ಖುಷ್ಬು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಳೆಯ ಟ್ವೀಟ್ ಅನ್ನು ಡಿಲೀಟ್ ಮಾಡಿಲ್ಲ.
ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ ಎಂದು ಹೇಳಿದ ರಾಹುಲ್ ಗಾಂಧಿ ಇದೀಗ ಲೋಕಸಭೆಯಿಂದ ಅಮಾನತುಗೊಂಡಿದ್ದಾರೆ. ಸೂರತ್ ನ್ಯಾಯಾಲಯವು, ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ಸಂಸತ್ ಪ್ರಕಟಿಸಿತ್ತು.
ಇದರ ವಿರುದ್ದ ಗುಜರಾತ್ನ ಸೂರತ್ ನಲ್ಲಿ ಕೇಸ್ ದಾಖಲಾಗಿತ್ತು. ಗುಜರಾತ್ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್ ವಿರುದ್ಧ ಕ್ರಿಮಿನಲ್ ಹಾನಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತು. ಆದರೆ, ಈ ತೀರ್ಪನ್ನು ರಾಹುಲ್ ಗಾಂಧಿ ಪ್ರಶ್ನಿಸಲಿರುವ ಕಾರಣ, ಕೋರ್ಟ್ ತಾನು ನೀಡಿದ ಎರಡು ವರ್ಷಗಳ ಶಿಕ್ಷೆಯನ್ನು ಒಂದು ತಿಂಗಳ ಮಟ್ಟಿಗೆ ಅಮಾನತುಗೊಳಿಸಿತ್ತು.
ಇದೀಗ ಖುಷ್ಬು ಟ್ವೀಟ್ ಕುರಿತು ಪೂರ್ಣೇಶ್ ಮೋದಿ ಅವರು ದೂರು ಸಲ್ಲಿಸುತ್ತಾರ? ಎಂದು ವಿರೋಧಪಕ್ಷಗಳು ಪ್ರಶ್ನಿಸಿವೆ. ಖುಷ್ಬು ಅವರು ಕಾಂಗ್ರೆಸ್ ತೊರೆದ ನಂತರ ೨೦೨೦ ರಲ್ಲಿ ಬಿಜೆಪಿಗೆ ಸೇರಿದ್ದರು.