ಖುಷಿ ಯಶಸ್ಸು ೧೦೦ ಕುಟುಂಬಗಳಿಗೆ ತಲಾ ಒಂದು ಲಕ್ಷ

ವಿಶಾಖಪಟ್ಟಣಂ,ಸೆ.೫-ಶಿವಾ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ಖುಷಿ ಚಿತ್ರದ ಯಶಸ್ಸಿನಿಂದಾಗಿ ಚಿತ್ರತಂಡದ ಖುಷಿಯಲ್ಲಿ ಮುಳುಗಿದೆ. ವಿಶಾಖಪಟ್ಟಣಂನಲ್ಲಿ ಚಿತ್ರದ ವಿಜಯೋತ್ಸವ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಾಯಕ ವಿಜಯ್ ದೇವರಕೊಂಡ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ನೂರು ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತಮ ಹಣ ಸಂಪಾದಿಸಿ ತಂದೆ ತಾಯಿಯರನ್ನು ಸಂತೋಷ ಪಡಿಸಿ ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದರು. ಈ ವಿಷಯಗಳೇ ತನಗೆ ಇಲ್ಲಿಯವರೆಗೆ ಸ್ಫೂರ್ತಿ ನೀಡಿದ್ದು, ಇನ್ನು ಮುಂದೆ ತಮ್ಮ ಅಭಿಮಾನಿಗಳಿಗಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಫೇಕ್ ರಿವ್ಯೂ, ಸುಳ್ಳು ಪ್ರಚಾರವನ್ನು ಮೆಟ್ಟಿ ನಿಂತು ಖುಷಿ ಸಿನಿಮಾ ಇಂದು ಯಶಸ್ಸು ಕಾಣುತ್ತಿರುವುದಕ್ಕೆ ಅದರ ಅಭಿಮಾನಿಗಳೇ ಕಾರಣ ಎಂದಿದ್ದಾರೆ ವಿಜಯ್ ದೇವರಕೊಂಡ. ಕೆಲವರು ಹಣ ಕೊಟ್ಟು ನೀಡಿ ಬೇರೆ ಅವರಿಂದ ಖುಷಿ ಚಿತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಆದರೆ ಅಭಿಮಾನಿಗಳ ಪ್ರೀತಿಯ ಮುಂದೆ ಯಾವುದೂ ಫಲಕಾರಿಯಾಗುತ್ತಿಲ್ಲ ಎಂದು ವಿವರಿಸಿದ್ದಾರೆ.
ಅಭಿಮಾನಿಗಳ ಮುಖದಲ್ಲಿ ಸಂತಸ ಕಾಣುವ ಆಸೆ ಈ ಚಿತ್ರದಿಂದ ಈಡೇರಿದೆ ಎಂದ ಅವರು, ಎಲ್ಲರೊಂದಿಗೂ ಸಂತಸ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ನೂರು ಕುಟುಂಬಗಳನ್ನು ಆಯ್ಕೆ ಮಾಡಿ ಪ್ರತಿ ಕುಟುಂಬಕ್ಕೆ ತಲಾ ೧ ಲಕ್ಷ ನೀಡುವುದಾಗಿ ವಿಜಯ್ ಘೋಷಿಸಿದರು. ಈ ಮೊತ್ತವನ್ನು ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ಅವರಿಗೆ ನೀಡಲಾಗುವುದು ಎಂದು ಹೇಳಿದರು.
ನನ್ನ ಸಂತೋಷವನ್ನು ಮಾತ್ರವಲ್ಲದೆ ನನ್ನ ಗಳಿಕೆಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನಾವೆಲ್ಲ ಒಂದೇ ಕುಟುಂಬ ಎಂದು ವಿಜಯ್ ದೇವರಕೊಂಡ ಭಾವುಕರಾದರು.