ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರ ಮುಷ್ಕರ-ಗ್ರಾಹಕರ ಪರದಾಟ

ಸಿರವಾರ. ಮಾ.೧೫- ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ ಅಡಿ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರಿಂದ ಬ್ಯಾಂಕ್ ಬಾಗಿಲು ಮುಚ್ವಿರುವದರಿಂದ ಗ್ರಾಹಕರ ಪರದಾಡುವಂತಾಗಿತು.
ಪಟ್ಟಣದಲ್ಲಿ ಎಸ್.ಬಿ.ಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪ್ರಗತಿ ಕೃಷ್ಣ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಸೇರಿ ಸುಮಾರು ೧೦ಕ್ಕೂ ಅಧಿಕ ಸಹಕಾರ ಬ್ಯಾಂಕುಗಳು ಇವೆ. ಬ್ಯಾಂಕ್ ಮುಷ್ಕರ ಕರೆ ನೀಡಿದ ಹಿನ್ನಲ್ಲೆಯಲ್ಲಿ ಎಲ್ಲಾವು ಬಾಗಿಲು ಮುಚ್ಚಿದವು.
ಬ್ಯಾಂಕುಗಳ ಸುಧಾರಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಖಾಸಗೀಕರಣಕ್ಕೆ ಮುಂದಾಗಿದೆ. ಖಾಸಗೀಕರಣ, ಆಸ್ತಿ ವಸೂಲಿ ಕಂಪನಿ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ವಿಮಾ ಕ್ಷೇತ್ರದಲ್ಲಿ ಶೇ ೭೪ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಮುಂದಾಗಿರುವುದು ಮಾರಕ ಕ್ರಮಗಳು. ೧೯೪೭ರಿಂದ ೧೯೬೯ರ ಅವಧಿಯಲ್ಲಿ ಒಟ್ಟು ೫೫೦ ಖಾಸಗಿ ಬ್ಯಾಂಕುಗಳು ಬಾಗಿಲು ಮುಚ್ಚಿದ್ದವು. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಇಲ್ಲವಾದಲ್ಲಿ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂಬುದು ನೌಕರರ ಆರೋಪವಾಗಿದೆ.
ಖಾಸಗೀಕರಣ ಮಾಡಿದರೆ ಜನರ ಉಳಿತಾಯದ ಹಣದ ಲೂಟಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಠೇವಣಿದಾರರ ಹಿತಾಸಕ್ತಿಗೂ ಧಕ್ಕೆ ಉಂಟಾಗುತ್ತದೆ. ಉದ್ಯೋಗ ಅವಕಾಶ, ಮೀಸಲಾತಿ, ಸಾಮಾಜಿಕ ನ್ಯಾಯಕ್ಕೂ ಧಕ್ಕೆಯಾಗುತ್ತದೆ. ಬ್ಯಾಂಕುಗಳನ್ನು ಮುಚ್ಚುವುದರಿಂದ ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಬಹುದು ಎಂದು ಆತಂಕ ನೌಕರರದ್ದು.
ಬ್ಯಾಂಕ್ ಸೇವೆಯಿಲ್ಲದೆ ತೊಂದರೆ: ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಬ್ಯಾಂಕಿಂಗ್ ಸೇವೆ ಸ್ಥಗಿತಗೊಂಡಿದೆ. ಗ್ರಾಹಕರು ಬ್ಯಾಂಕುಗಳಿಗೆ ಬಂದು, ವಾಪಸ್ ಹೋಗುತ್ತಿರುವ ದೃಶ್ಯ ಕಂಡು ಬಂತು. ಕೆಲವೆಡೆ ಎಟಿಎಂಗಳಲ್ಲಿ ಹಣ ಇಲ್ಲದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.