ಖಾಸಗೀಕರಣ ವಿರೋಧಿಸಿ ಅ. 30ರಂದು ಜೆಸ್ಕಾಂ ಕಚೇರಿಗೆ ಮುತ್ತಿಗೆ, ನ.3ಕ್ಕೆ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ

ಕಲಬುರಗಿ,ಅ.25: ವಿದ್ಯುತ್ ಮತ್ತು ರೈಲ್ವೆ ಖಾಸಗೀಕರಣ ವಿರೋಧಿಸಿ ಅಕ್ಟೋಬರ್ 30ರಂದು ಗುಲಬರ್ಗಾ ವಿದ್ಯುತ್ ಪ್ರಸರಣಾ ನಿಗಮದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಹಾಗೂ ನವೆಂಬರ್ 3ರಂದು ನಗರದ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಪಂಪ್ ಸೆಟ್ಟುಗಳ ರೈತರಿಗೆ ಹಗಲು ಹೊತ್ತಿನಲ್ಲಿ 12 ತಾಸು ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಆಂದೋಲನ ಆರಂಭಿಸಲಾಗಿದ್ದು, ಕಳೆದ ಅಕ್ಟೋಬರ್ 22ರಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಪ್ರಾರಂಭಿಸಿದ್ದು, ಜಿಲ್ಲೆಯ ಎಲ್ಲ ಕಡೆಗಳಿಂದಲೂ ಆಗಮಿಸುವ ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಇಂಧನ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ತೊಗರಿ ನಾಡಿನಲ್ಲಿ ಅನ್ನದಾತರ ರೊಕ್ಕದ ಮಾಲು ಹೆಸರು, ಉದ್ದು, ಸೊಯಾಬಿನ್, ತೊಗರಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಮಾಡಿದ ಲಾಗುವಡಿ ಬರಲಾರದೆ ಸಾಲದ ಮಡುವಿನಲ್ಲಿ ಒದ್ದಾಡುವಂತಾಗಿದೆ. ರೈತರ ಬದುಕು ಅದೋಗತಿಯಾಗಿದೆ. ಸಾಲ ಬಾಧೆ ತಾಳಲಾರದೇ ಬೇಸತ್ತು ರೈತರು ಸರಣಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗೀಕರಣ ಕೈಬಿಡುವಂತೆ, 2022ರ ವಿದ್ಯುತ್ ಮಸೂದೆ ಹಿಂಪಡೆಯುವಂತೆ, ನೀರಾವರಿ ಪಂಪ್ ಸೆಟ್ಟುಗಳಿಗೆ ಹಗಲು ಹೊತ್ತಿನಲ್ಲಿ 12 ತಾಸುಗಳ ವಿದ್ಯುತ್ ಕೊಡುವಂತೆ, ಪಂಪ್‍ಸೆಟ್ಟುಗಳಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಕೊಡುವುದನ್ನು ಕೈ ಬಿಡುವಂತೆ ಒತ್ತಾಯಿಸಿದ ಅವರು, ರೈತ ವಿರೋಧಿ ಜಾರಿಗೆ ತಂದ ಸರ್ಕಾರದ ನೀತಿಯನ್ನು ಖಂಡಿಸಿ, ವಿದ್ಯುತ್ ಕೊರತೆಯಿಂದ ಒಣಗಿದ ನೀರಾವರಿ ಬೆಳೆಗಳಿಗೆ ಪ್ರತಿ ಎಕರೆಗೆ ಹತ್ತು ಸಾವಿರ ರೂ.ಗಳ ಪರಿಹಾರ ಕೊಡುವಂತೆ, ಪಂಪ್‍ಸೆಟ್ಟುಗಳಿಗೆ ಮೀಟರ್ ಹಾಕುವುದು ತಡೆಗಟ್ಟುವಂತೆ, ಪಂಪ್‍ಸೆಟ್ ಟಿಸಿ ಸುಟ್ಟರೆ ತಕ್ಷಣವೇ ಕೂಡಿಸುವಂತೆ ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಕ್ಟೋಬರ್ 30ರಂದು ನಗರದ ನೆಹರೂ ಗಂಜ್‍ದಿಂದ ಮೆರವಣಿಗೆ ಮೂಲಕ ಜೆಸ್ಕಾಂ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಹೇಳಿದರು.
ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೈಲ್ವೆ ಕ್ಷೇತ್ರವನ್ನೂ ಖಾಸಗೀಕರಣ ಮಾಡಲು ಹೊರಟಿದೆ. ರೈಲ್ವೆ ನಿಲ್ದಾಣಗಳು, ನಿಲ್ದಾಣಗಳ ಸುತ್ತ ಇರುವ ರೈಲ್ವೆ ಭೂಮಿ, ರೈಲ್ವೆ ಹಳಿಗಳು, ರೈಲುಗಳು ಸರಕು ದಾಸ್ತಾನು ಮುಂತಾದವರು ನಮ್ಮ ಜೀವಾಳ. ಭಾರತದಲ್ಲಿ 7300 ರೈಲು ನಿಲ್ದಾಣಗಳು, 13452 ಪ್ರಯಾಣಿಕರ ರೈಲುಗಳು ಇದ್ದು, ಪ್ರತಿನಿತ್ಯ 2.40 ಕೋಟಿ ಪ್ರಯಾಣಿಕರು ಸಂಚರಿಸುತ್ತಾರೆ. 9141 ಗೂಡ್ಸ್ ರೈಲುಗಳು ಪ್ರತಿ ದಿನ ಸಂಚರಿಸುತ್ತಿವೆ. ಆಹಾರ ಧಾನ್ಯಗಳು, ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳು, ಕೃಷಿ ಮತ್ತು ಕೈಗಾರಿಕೆ ಉತ್ಪನ್ನಗಳು ಸೇರಿದಂತೆ 1.42 ಶತಕೋಟಿ ಮೆಟ್ರಿಕ್ ಟನ್ ಸರಕುಗಳನ್ನು ಪ್ರತಿ ದಿನ ಸಾಗಣೆ ಮಾಡಲಾಗುತ್ತಿದೆ. 1991ರಿಂದ ಜಾರಿಗೆ ಬಂದ ಉದಾರೀಕರಣ ನೀತಿಯನ್ನು ಮೋದಿ ಸರ್ಕಾರವು ಅನುಸರಿಸುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಖಾಸಗೀಕರಣದಿಂದ ರೈಲ್ವೆಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಸಿಬ್ಬಂದಿಗಳಿಗೆ ಸಮಸ್ಯೆಯಾಗುತ್ತದೆ. ದೇಶಕ್ಕೂ ಸಹ ವಿನಾಶಕಾರಿಯಾಗಲಿದೆ. ಆದ್ದರಿಂದ ಖಾಸಗೀಕರಣ ಕೈಬಿಡುವಂತೆ ನವೆಂಬರ್ 3ರಂದು ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ರೂಪಿಸಲಾಗಿದೆ ಎಂದು ಅವರು ಹೇಳಿದರು. ಎಂ.ಬಿ. ಸಜ್ಜನ್, ನಾಗಯ್ಯಸ್ವಾಮಿ, ಚಂದಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.