ಖಾಸಗಿ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ : ಬಯಲಲ್ಲೇ ಬಹಿರ್ದೆಸೆ


ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಮನೆಮನೆಗೆ ಶೌಚಾಲಯ ಕಟ್ಟಿಸಿ, ವಾರ್ಡಿಗೊಂದು ಸಾರ್ವಜನಿಕ ಶೌಚಾಲಯ ನಿರ್ಮಿಸಿ ಬಯಲು ಶೌಚಾಲಯ ಮುಕ್ತ ಪಟ್ಟಣ ಎಂದು ಘೋಷಿಸಿದ್ದೂ ಆಯಿತು. ಆದರೆ ಇವೆಲ್ಲ ಕಡತದಲ್ಲಿ ಆದವೇ ವಿನಹ ವಾಸ್ತವದಲ್ಲಿ ಅಲ್ಲ ಎಂಬಂತಿದೆ ಪಟ್ಟಣದ ಸ್ಥಿತಿ.
ಪಟ್ಟಣವನ್ನು ಬಯಲು ಶೌಚಾಲಯ ಮುಕ್ತಗೊಳಿಸಲು ಲಕ್ಷಾಂತರ ರೂಪಾಯಿ ವಿನಿಯೋಗಿಸಿ ಸಾರ್ವಜನಿಕ ಶೌಚಾಲಯಗಳ ನಿರ್ಮಿಸಲಾಗಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಜನ ಬಯಲು ಬಹಿರ್ದೆಸೆ ಅವಲಂಬಿಸುವಂತಾಗಿದೆ.
ಪಟ್ಟಣದಲ್ಲಿ 20ವಾರ್ಡ್‌ ಗಳಿದ್ದು ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ  ಪಟ್ಟಣದಲ್ಲಿ 18 ಸಾರ್ವಜನಿಕ ಶೌಚಾಲಯಗಳಿವೆ. ಎಲ್ಲಾ ಸೌಚಾಲಯಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ, ಇಲ್ಲಿ ಬಹುತೇಕ ಬಡ ರೈತಾಪಿ ವರ್ಗದ ಕೂಲಿ ಕಾರ್ಮಿಕರೇ ವಾಸವಿದ್ದಾರೆ. ಹಲವು ಜನ ಈಗಲೂ ನಿತ್ಯಕರ್ಮಕ್ಕೆ ಮುಳ್ಳು ಕಂಟಿಗಳ ಪೊದೆ, ಸ್ಮಶಾನ ಆಶ್ರಯಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಗಿ ಖಾಸಗಿ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ:
ಪಟ್ಟಣದ 6ನೇ ವಾರ್ಡಿನ ಸಾರ್ವಜನಿಕ ಶೌಚಾಲಯವು ಖಾಸಗಿಯವರ ಜಾಗದಲ್ಲಿ ನಿರ್ಮಿಸಲಾಗಿದ್ದು, ಸರ್ಕಾರದ ಹಣದ ದುಂದು ವೆಚ್ಚಕ್ಕೆ ಸಾಕ್ಷಿಯಾಗಿದೆ. ಶೌಚಾಲಯ ನಿರ್ಮಿಸಿ ವರ್ಷಗಳೇ ಕಳೆದಿವೆ, ಆದರೆ ಖಾಸಗಿ ವ್ಯಕ್ತಿ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದರಿಂದ ಸಾರ್ವಜನಿಕರ ಬಳಕೆಗೆ ಶೌಚಾಲಯ ಇಲ್ಲವಾಗಿದೆ. ಇದರಿಂದಾಗಿ ಸಾರ್ವಜನಿಕ ಶೌಚಾಲಯದ ಮುಂದಿನ ರಸ್ತೆಯೇ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.
 ಅಷ್ಟೇ ಅಲ್ಲದೆ 3, 4, 15 ಹಾಗೂ 18 ನೇ ವಾರ್ಡ್‌ಗಳಲ್ಲಿ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಬಳಸಲು ಯೋಗ್ಯವಾಗಿಲ್ಲ. ಇವುಗಳಿಗೆ ನೀರು ಸರಬರಾಜು ಮಾಡುವ ಕೊಳವೆಬಾವಿ ಹಾಳಾಗಿವೆ ಹೋಗಿರುತ್ತವೆ. ನೀರಿನ ಟ್ಯಾಂಕ್, ಪೈಪು ಒಡೆದಿವೆ, ವಿದ್ಯುತ್ ಸೌಲಭ್ಯವು ಇಲ್ಲದಂತೆ ಆಗಿವೆ.
ಹಲವು ಶೌಚಾಲಯಗಳ ಸುತ್ತ ಜಾಲಿ ಗಿಡಗಳು ಬೆಳೆದು ನಿಂತಿದ್ದು ಹಾವು ಚೇಳು ಗಳಿಂದ ವಾಸವಾಗಿದ್ದು ಜನರು ಭಯದಿಂದ ಭೀತಿಯ ಮಧ್ಯೆ ಹಾಗೂ ದುರ್ನಾತದ ಒಳಹೋಗಿ ನಿತ್ಯಕರ್ಮ ಮುಗಿಸಿಕೊಂಡು ಬರುವುದು ಮಹಿಳೆಯರಿಗೆ ದೊಡ್ಡ ಸವಾಲಾಗಿದೆ.
ಸೂರ್ಯ ಮೂಡುವುದಕ್ಕೂ ಮುನ್ನ ಹಾಗೂ ಸೂರ್ಯ ಮುಳುಗಿದ ನಂತರ ಚೊಂಬು, ನೀರಿನ ಪಾತ್ರೆಗಳನ್ನು ಹಿಡಿದು ಜನಸಂಚಾರ ವಿರಳವಿರುವ ಜಾಗಗಳನ್ನು ಹುಡುಕುತ್ತ ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ.
ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೇಳುತ್ತಾರೆ. ಅದರೆ ಬಡತನ ಹಾಗೂ ಜಾಗದ ಸಮಸ್ಯೆಯಿಂದ ಇದು ಸಾಧ್ಯವಾಗುತ್ತಿಲ್ಲ. ಸಾಮೂಹಿಕ ಶೌಚಾಲಯ ನಿರ್ಮಿಸಿಕೊಡಿ ಎಂಬ ನಮ್ಮ ಕೂಗು ಆಡಳಿತಕ್ಕೆ ಕೇಳುತ್ತಿಲ್ಲ. ಬಾಣಂತಿಯರು, ವೃದ್ಧರು, ಅಂಗವಿಕಲರಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಪಟ್ಟಣದ ಹಂಪಮ್ಮ, ರಾಜಮ್ಮ, ಮಾಳಮ್ಮ, ಕಾವೇರಿ ತಿಳಿಸಿದರು.
ಸ್ವಚ್ಚತೆಗಾಗಿ ಪ್ರತ್ಯೇಕ ಅನುದಾನ ಇರುವುದಿಲ್ಲ. ಅದಕ್ಕಾಗಿ ಅವಶ್ಯಕತೆ ಇರುವಲ್ಲಿ ಆದ್ಯತೆಯ ಮೇರೆಗೆ ಸ್ವಚ್ಚತೆ ಕೈಗೊಳ್ಳುತ್ತೇವೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಬಿ. ಅನ್ನಪೂರ್ಣ ಹೇಳಿದರು.
 ಹೇಳಿಕೆ : ಪಂಚಾಯಿತಿ ಅಧಿಕಾರಿಗಳಿಗೆ ಶೌಚಾಲಯ ನಿರ್ಮಿಸುವ ಸಂದರ್ಭದಲ್ಲಿ, ಆಸ್ತಿ ದಾಖಲೆಗಳನ್ನು ತೋರಿಸಿದ್ದೇನೆ. ಅದರು ಅಧಿಕಾರಿಗಳು ನನ್ನ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದಾರೆ. ಈ ಜಾಗದಲ್ಲಿ  ಅಂಗನವಾಡಿ ಅಥವಾ ಸಮುದಾಯ ಭವನಕ್ಕೆ ಬಳಸಿದಲ್ಲಿ ನೀಡುತ್ತೇನೆ ಎಂದು ಖಾಸಗಿ ಶೌಚಾಲಯ ಜಾಗದ ವ್ಯಕ್ತಿ ಸುಳುವಾಯಿ ಭಾಷಾಸಾಬ್, 6ನೇ ವಾರ್ಡ್ ನಿವಾಸಿ ತಿಳಿಸಿದರು.
ಹೇಳಿಕೆ : ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಎಲ್ಲಾ ಕಡೆ ಪೌರಕಾರ್ಮಿಕರನ್ನು ಕಳುಹಿಸುತ್ತೇವೆ. ಆದರೆ ಜನರ ಸಹಕಾರದ ಹೊರತು ಯಾವ ಸೌಲಭ್ಯಗಳೂ ಉಳಿಯುವುದಿಲ್ಲ. ಶೌಚಾಲಯ ಕಟ್ಟಡ ಹಾಗೂ ಸೌಕರ್ಯಗಳನ್ನು ಸರಿಯಾಗಿ ಬಳಸಬೇಕು ಎಂದು  ತೆಕ್ಕಲಕೋಟೆ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಪರಶುರಾಮ ತಿಳಿಸಿದರು.