ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಸರಕಾರದ ನೆರವು ಸಿಗದೇ ಬೀದಿ ಪಾಲು: ಮಂಜುನಾಥ ಕಾಮಗೊಂಡ

ಇಂಡಿ, ಮೇ.31-ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಸರಕಾರ ಯಾವುದೇ ರೀತಿಯಿಂದ ಸಹಾಯ ಮಾಡದೇ ಇರುವುದರಿಂದ ಖಾಸಗಿ ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಹೀಗಾಗಿ ಅವರಿಗೆ ವೈಯಕ್ತಿಕವಾಗಿ ಆರ್ಥಿಕವಾಗಿ ಸಹಾಯ ಮಾಡಲು ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ ಹೇಳಿದರು.
ಭಾನುವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಶಿಕ್ಷಣ ಸಚಿವರ ಹತ್ತಿರ ಹೋಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಪರಿಹಾರ ನೀಡಿ ಎಂದು ಮನವಿ ಮಾಡಿಕೊಂಡಾಗ, ಶಿಕ್ಷಣ ಸಚಿವರು ಮನವಿಗೆ ಸ್ಪಂದಿಸದೆ ಪರಿಹಾರ ನೀಡಲು ಆಗಲ್ಲ ಬೇಕಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಸಚಿವರು ಮೊದಲು ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದರು.
ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ್ ಮಾತನಾಡಿ ನಮ್ಮ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ ಅವರು ಹಿರೇಬೇವನೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೇರಿಕೊಂಡು ಇಂಡಿ ಮತಕ್ಷೇತ್ರದ ಎಲ್ಲ ಹಳ್ಳಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದರು.
ಹಿರೇಬೇವನೂರ ಜಿಲ್ಲಾ ಪಂಚಾಯತ್ ಮತಕ್ಷೇತ್ರದ ಹಳ್ಳಿಗಳಾದ ಹಿರೇಬೇವನೂರ, ಹಿರೇಬೇವನೂರ ತಾಂಡಾ, ಸಾತಲಗಾಂವ, ಲಾಳಸಂಗಿ, ರೋಡಗಿ, ಶಿವಪೂರ, ನಾದ ಬಿಕೆ, ನಾದ ಕೆಡಿ, ಗೋಳಸಾರ, ಮಿರಗಿ, ಅರ್ಜುಣಗಿ ಕೆ.ಡಿ, ಅರ್ಜುಣಗಿ ಬಿ.ಕೆ, ಮಾರ್ಸನಳ್ಳಿ, ಹಂಚನಾಳ ಗ್ರಾಮದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹೆಸರು ನೋಂದಾಯಿಸಬೇಕು.
ಈ ಗುರುನಮನ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಚಿದುಗೌಡ ಬಿರಾದಾರ 7259796924, ಮಲ್ಲು ಅತನೂರ 7259931803, ಮಂಜು ಕಾಮಗೊಂಡ 9482281111 ಅವರನ್ನು ಸಂಪರ್ಕಿಸಬಹುದಾಗಿದೆ.