ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಗದಾಪ್ರಹಾರ 

ದಾವಣಗೆರೆ.ಜು.೨೫: ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ನಡೆಸುತ್ತಿರುವ ಗದಾ ಪ್ರಹಾರ ನಿಲ್ಲಿಸಬೇಕು ಎಂದು ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಸಹ ಕಾರ್ಯದರ್ಶಿ ಮಂಜುನಾಥ್ ಅಗಡಿ ಒತ್ತಾಯಿಸಿದರು.ನಗರದ ಬಂಟರ ಭವನದಲ್ಲಿ ಖಾಸಗಿ ಶಾಲೆಗಳಲ್ಲಿ ಶೈಕ್ಷಣಿಕ ಬಲವರ್ಧನೆ ಗಾಗಿ ರಾಜ್ಯ ಮಟ್ಟದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತು ಗಳಾಡಿದ ಅವರು, ರಾಜ್ಯ ಸರ್ಕಾರ ಪ್ರತಿಯೊಂದು ಗಂಟೆಗೆ ಹೊಸ ಹೊಸ ಆದೇಶ ಹೊರಡಿಸುತ್ತಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಷ್ಟವಾಗುತ್ತದೆ ಎಂದರು.ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಖಾಸಗಿ ಶಿಕ್ಷಣ ಸಂಸ್ಥೆಗಳು ಸಮಾಜ ಸೇವೆ ರೂಪದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆರ್ಥಿಕ ಕಾರಣದಿಂದ ಮಾತ್ರ ಸಂಸ್ಥೆಗಳ ನಡೆಸುತ್ತಿಲ್ಲ. ಸಮಾಜ ಸೇವೆ ಉದ್ದೇಶದ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರ ಬ್ರಹ್ಮಾಸ್ತ್ರ ರೂಪದಲ್ಲಿ 67 ಆದೇಶ ಹೇರಿತ್ತು. ಅಮರಕುಮಾರ್ ಪಾಂಡೆ ಮತ್ತಿತರ ಹೋರಾಟದ ಫಲವಾಗಿ ಆದೇಶಗಳನ್ನು ಸರಳೀಕರಣ ಮಾಡಲಾಗಿದೆ ಎಂದು ತಿಳಿಸಿದರು.ರುಪ್ಸ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ಪ್ರಸನ್ನ ಕುಮಾರ್, ಟಿ.ಎಂ. ಉಮಾಪತಯ್ಯ, ಕೆ.ಸಿ. ಲಿಂಗರಾಜ್, ಎನ್.ಎಂ. ಲೋಕೇಶ್,  ಉಮಾಶಂಕರ್, ಜಿ.ಆರ್. ತಿಪ್ಪೇಶಪ್ಪ, ಎಂ. ನಿರಂಜನ ಮೂರ್ತಿ, ಜಸ್ಟಿನ್ ಡಿಸೌಜ ಇತರರು ಇದ್ದರು.

Attachments area