ಖಾಸಗಿ ಶಾಲೆ ವ್ಯಾಮೋಹ ಬಿಡಿ

ಕೋಲಾರ,ಜೂ,೧೧:ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಂಸ್ಕಾರಯುತ ಹಾಗೂ ಬದುಕು ಕಲಿಸುವ ಶಿಕ್ಷಣ ಸಿಗುತ್ತದೆ, ಪೋಷಕರು ಖಾಸಗಿ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲಿಸಿ ಎಂದು ಕೊಂಡರಾಜನಹಳ್ಳಿ ಗ್ರಾ.ಪಂ ಸದಸ್ಯ ಶ್ರೀನಿವಾಸ ಯಾದವ್ ಕರೆ ನೀಡಿದರು.
ಕೊಂಡರಾಜನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾಂರಂಭೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲೇ ನುರಿತ ಶಿಕ್ಷಕರಿರುತ್ತಾರೆ ಎಂಬ ಸತ್ಯ ಅರಿತುಮಕ್ಕಳನ್ನು ದಾಖಲಿಸಿ ಎಂದ ಅವರು, ಸರ್ಕಾರಿ ಶಾಲೆಗಳು ಉಳಿದರೆ ಮಾತ್ರವೇ ಸಮಾನ ಶಿಕ್ಷಣ, ಸರ್ವರಿಗೂ ಶಿಕ್ಷಣ ಲಭಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಜಗನ್ನಾಥ್, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಸಮವಸ್ತ್ರ,ಶೂ, ಹಾಲು, ಬಿಸಿಯೂಟ ಎಲ್ಲಾ ಸೌಲಭ್ಯಗಳು ಇದೆ, ಇದನ್ನು ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಕೋರಿದರು.
ಸರ್ಕಾರಿ ಶಾಲೆಗಳಲ್ಲೂ ಇಂದು ಖಾಸಗಿ ಶಾಲೆಗಳನ್ನು ಮೀರಿದಂತೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಮಕ್ಕಳಿಗೆ ಶುದ್ದ ಕುಡಿಯುವ ನೀರು, ದಾನಿಗಳ ನೆರವಿನಿಂದ ಮತ್ತಷ್ಟು ಸೌಲಭ್ಯಗಳು ಹರಿದು ಬರುತ್ತಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಂಕರ್, ಶಿಕ್ಷಕರಾದ ಶ್ರೀರಾಂ, ವಿಜಯಮ್ಮ, ಮಂಜುಳಾ, ಶಾಂತಮ್ಮ ಮತ್ತಿತರರಿದ್ದರು.