ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

ನವದೆಹಲಿ,ಮೇ೧೬:ದೆಹಲಿಯ ಖಾಸಗಿ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ದೆಹಲಿಯ ಪುಷ್ಪ ವಿಹಾರ್‌ನಲ್ಲಿರುವ ಅಮೃತ ಶಾಲೆಗೆ ಇಂದು ಬೆಳಿಗ್ಗೆ ೬.೩೫ರ ಸಮಯದಲ್ಲಿ ಬೆದರಿಕೆ ಮೇಲ್ ಬಂದಿದ್ದು, ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ.
ಸುದ್ದಿ ತಿಳಿದ ತಕ್ಷಣ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಶೋಧನಾಕಾರ್ಯ ಕೈಗೊಂಡರು. ಆದರೆ, ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ದೆಹಲಿಯ ಮಥುರಾ ರಸ್ತೆಯಲ್ಲಿ ದಿ ಡೆಲ್ಲಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಮೇಲ್ ಬಂದಿತ್ತು. ಈ ಪ್ರಕರಣದ ೧೫ ದಿನದ ಬಳಿಕ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.