ಖಾಸಗಿ ಶಾಲೆಗಳ ರೀತಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ – ಶಾಸಕ ಕೆ.ಶಿವನಗೌಡ ನಾಯಕ

ಅರಕೇರಾ.ಜ.೧೪-ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ರೀತಿಯಲ್ಲಿ ಅಭಿವೃದ್ಧಿ ಕಾಣಬೇಕು. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಹಾಗೆಯೇ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗದಂತೆ ಕ್ರಮಕೈಗೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಸಮೀಪದ ಗಲಗ ಗ್ರಾಮದಲ್ಲಿ ೩.೫ ಕೋಟಿ ರೂಪಾಯಿ ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಎಲ್ಲ ಮಕ್ಕಳು ಶಿಕ್ಷಣ ಪಡೆದರೆ ಅಭಿವೃದ್ಧಿ ಸಾದ್ಯ ಹೀಗಾಗಿ ವಿಧಾನ ಸಭಾ ಕ್ಷೇತ್ರದಲ್ಲಿ ೪ ರಿಂದ ೬ ಸಾವಿರ ಜನಸಂಖ್ಯೆ ಹೊಂದಿದ ಪ್ರತಿ ಗ್ರಾಮದಲ್ಲಿ ಒಂದು ಸುಸಜ್ಜಿತವಾದ ಸರ್ಕಾರಿ ಶಾಲೆಯನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ರೀತಿಯ ರೂಮ್,ಶುದ್ಧ ಕುಡಿಯುವ ನೀರಿನ ಸೌಲಭ್ಯ, ಬಿಸಿಯೂಟದ ಡೈನಿಂಗ್ ಹಾಲ್, ಆಟದ ಮೈದಾನ, ಹೈಟೆಕ್ ಶೌಚಾಲಯಗಳು ಸೇರಿದಂತೆ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕು.
ಗ್ರಾಮದಲ್ಲಿ ೧ ಕೋಟಿ ರೂಪಾಯಿ ವೆಚ್ಚದ ಸಿಸಿ ರಸ್ತೆ ಹಾಗೂ ಇಲ್ಲಿನ ದೇವಸ್ಥಾನಗಳ ಅಭಿವೃದ್ಧಿಗೆ ಸುಮಾರು ೩೪.೬೦ ಲಕ್ಷ ರೂಗಳನ್ನು ನೀಡಲಾಗಿದೆ. ಶ್ರೀಕೃಷ್ಣ ದೇವರಾಯನ ಹಾಗೆ ತಾಲ್ಲೂಕಿನ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಗಲಗ ಆರೋಢ ಮಠದ ಶ್ರೀಗಳು ಸಾನಿಧ್ಯ ವಹಿಸಿದ್ದರು, ಹಿರಿಯ ಮುಖಂಡ ವಿಶ್ವನಾಥ ಬನಹಟ್ಟಿ, ತಾಲ್ಲೂಕು ಮಂಡಲ ಅಧ್ಯಕ್ಷ ಜಂಬಣ್ಣ ನೀಲಗಲ್, ತಿರುಪತಿ ನಾಯಕ ಪಾಮರ್ತಿ, ಶಿವರಾಜ ಟಕನಮರಡಿ, ಯಲ್ಲಮ್ಮ ಪಿ.ಪಾಟೀಲ್, ಬಸವರಾಜ ವಕೀಲ್ ಗಾಣಧಾಳ, ಶಾಂತಪ್ಪ ಸಾಹುಕಾರ್, ಲಿಂಗನಗೌಡ ಜೋಳದಹೆಡಗಿ, ಚಂದಪ್ಪ ಬುದ್ದಿನ್ನಿ, ವಿರುಪಣ್ಣ ಸಾಹು, ಇಓ ಪಂಪಾಪತಿ ಹಿರೇಮಠ, ಎಇಇ ನುಸರತ್ ಅಲೀ, ಎಡಿ ಬಸ್ಸಣ್ಣ ನಾಯಕ, ಬಿಇಓ ಸುಖದೇವ್, ಶಿವರಾಜ ಪೂಜಾರಿ, ನಿಜಗುಣ ಸ್ವಾಮಿ, ಮಹ್ಮದ್ ಖಾಜಿ ಬಸವ ಸೇರಿದಂತೆ ಗ್ರಾಮಸ್ಥರು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇನ್ನಿತರರು ಇದ್ದರು.