ಖಾಸಗಿ ಶಾಲಾ ಶಿಕ್ಷಕರ ಬದುಕಿಗೆ ಭದ್ರತೆ ಭರವಸೆ-ಕೆಂಪರಾಜು

ಗೌರಿಬಿದನೂರು.ನ೬:ಉತ್ತಮ ಶಿಕ್ಷಣವನ್ನು ಪಡೆದು ಖಾಸಗೀ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಸ್ವಾವಲಂಭಿ ಶಿಕ್ಷಕರ ಬದುಕಿಗೆ ಭದ್ರತೆ ಒದಗಿಸಲು ಸದಾ ಬದ್ಧವಾಗಿರುತ್ತೇವೆ ಎಂದು ಜಿ.ಪಂ ಸದಸ್ಯ ಕೆ.ಕೆಂಪರಾಜು ತಿಳಿಸಿದರು.
ನಗರದ ಹೊರವಲಯದಲ್ಲಿ ಗುರುವಾರ ಆಯೋಜಿಸಿದ್ದ ಖಾಸಗೀ ಶಾಲಾ ಶಿಕ್ಷಕರಿಗೆ ಸಹಕಾರ ನೀಡುವ ’ನೆರವು’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಯುವಕರು ಸಂಕಷ್ಟದಲ್ಲಿಯೇ ಪದವಿಯನ್ನು ಪಡೆದು ಜತೆಗೆ ಶಿಕ್ಷಕರ ತರಬೇತಿಯನ್ನು ಮುಗಿಸಿಕೊಂಡು ಬದುಕು ರೂಪಿಸಿಕೊಳ್ಳಲು ಅರೆಕಾಲಿಕ ವೃತ್ತಿಯಾಗಿ ಖಾಸಗೀ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಚಾರವಾಗಿದೆ. ಇದರಿಂದ ನೂರಾರು ಮಕ್ಕಳಿಗೆ ಜ್ಞಾನದ ಆಸರೆಯಾಗಿ ಅವರ ಬದುಕಿಗೆ ನಿಜವಾದ ಗುರುಗಳಾಗಿದ್ದೀರಾ. ಆದರೆ ಕೋವಿಡ್ ಸಂಕಷ್ಟದ ಪರಿಸ್ಥಿತಿಯಿಂದ ಶಾಲೆಗಳು ಆರಂಭವಾಗದೆ,
ಆಡಳಿತ ಮಂಡಳಿಗಳು ನೆರವಿಗೆ ಬಾರದೆ ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಭಾವಂತ ಶಿಕ್ಷಕರು ಬದುಕು ರೂಪಿಸಿಕೊಳ್ಳಲು ಪರಿತಪಿಸುವಂತಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಗುರ್ತಿಸಿ ಸಹಕಾರ ನೀಡುವ ಜನತೆಗೆ ಅವರಲ್ಲಿನ ಪ್ರತಿಭೆಗೆ ಅನುಗುಣವಾಗಿ ಸ್ಥಳೀಯವಾಗಿಯೇ ಕಾರ್ಯನಿರ್ವಹಿಸುವಂತಹ ವಿನೂತನ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಯುವಕರ ಶಕ್ತಿ ಈ ದೇಶದ ಪ್ರಗತಿಗೆ ಪೂರಕವಾಗಿರಬೇಕಾಗಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ನಿಮ್ಮೆಲ್ಲರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳಲ್ಲಿ ಬದಲಾವಣೆ ಕಾಣುವುದು ನಮ್ಮ ಕನಸಾಗಿದೆ ಎಂದು ಹೇಳಿದರು.
ಖಾಸಗೀ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೌಸ್ ಪೀರ್ ಮಾತನಾಡಿ, ಕೋವಿಡ್ ಪರಿಣಾಮವಾಗಿ ಇಡೀ ರಾಜ್ಯದಲ್ಲಿನ ಖಾಸಗೀ ಶಾಲೆಗಳು ಆರಂಭವಾಗದ ಕಾರಣ ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಬದುಕು ಅತಂತ್ರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಇವರ ನೆರವಿಗೆ ಬಾರದೆ ಕೈಚೆಲ್ಲಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಖಾಸಗೀ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಗುರ್ತಿಸಿ ಅವರ ಬಾಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಕೆ.ಕೆಂಪರಾಜು ಆರ್ಥಿಕ ಸಹಕಾರವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಅವರ ಕೈ ಬಲಪಡಿಸುವ ಕಾರ್ಯವನ್ನು ನಾವೆಲ್ಲ ಒಮ್ಮತದಿಂದ ಮಾಡಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಖಾಸಗೀ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶಿಕ್ಷಕರನ್ನು ಕೆ.ಕೆಂಪರಾಜು ಸನ್ಮಾನಿಸಿದರು.
ಮುಖಂಡರಾದ ವೇದಲವೇಣಿ ರಾಮು, ವೈ.ಕೆ.ಪ್ರಕಾಶ್, ಲಕ್ಷ್ಮೀಕಾಂತ್, ಶ್ರೀನಾಥ್, ಖಲೀಲ್, ಗಂಗಾಧರಪ್ಪ, ಸುನೀಲ್ ಪ್ರಕಾಶ್, ಮಲ್ಲಿಕಾರ್ಜುನ, ನಂಜುಂಡಪ್ಪ, ಸತೀಶ್, ಶಬ್ಬೀರ್, ಸತ್ಯನಾರಾಯಣ, ಜಗದೀಶ್ ಇತರರು ಭಾಗವಹಿಸಿದ್ದರು.