ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡಿ: ಜಲಾದೆ

ಬೀದರ:ಮೇ.27: ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರಿಗೆ ಮನವಿಪತ್ರ ಸಲ್ಲಿಸಿದ್ದಾರೆ.

ಕೋವಿಡ್ ಕಾರಣ ರಾಜ್ಯದಲ್ಲಿ ಒಂದು ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳು ನೆಲ ಕಚ್ಚಿವೆ. ಹಲವು ಖಾಸಗಿ ಶಾಲೆಗಳು ಮುಚ್ಚಿ ಹೋಗಿವೆ. ಶಿಕ್ಷಕರು ಕೆಲಸ ಕಳೆದುಕೊಂಡು ಆರ್ಥಿಕ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಬಹುತೇಕ ಶಿಕ್ಷಕರು ಜೀವನ ನಿರ್ವಹಣೆಗೆ ತರಕಾರಿ ಮಾರಾಟ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ.ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಂಘದ ವತಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ಪ್ರಕಟಿಸಿ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.