ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರಕ್ಕೆ ಆಗ್ರಹಿಸಿ ಪತ್ರ ಚಳುವಳಿ

ಕೆಂಭಾವಿ:ಡಿ.25:ಖಾಸಗಿ ಶಾಲೆಗಳ ಶಿಕ್ಷಕರು ವೇತನವಿಲ್ಲದೆ ಸಂಕಷ್ಟದಲ್ಲಿದ್ದು, ಶಿಕ್ಷಣ ಸಚಿವರು ಘೋಷಣೆ ಮಾಡಿರುವ 10 ಸಾವಿರ ರೂಪಾಯಿ ಪರಿಹಾರವನ್ನು ಖಾಸಗಿ ಶಿಕ್ಷಕರಿಗೆ ನೀಡಿ ಖಾಸಗಿ ಶಾಲೆಗಳ ಶಿಕ್ಷಕರ ನೆರವಿಗೆ ರಾಜ್ಯ ಸರ್ಕಾರ ಬರಬೇಕು ಎಂದು ಖಾಸಗಿ ಶಾಲೆಯ ಶಿಕ್ಷಕ ರಮೇಶ ಜಾಧವ ಆಗ್ರಹಿಸಿದರು.

ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ಯಾದಗಿರಿ ಜಿಲ್ಲಾ ಘಟಕದವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಚಳವಳಿಯ ಮುಂದಾಳತ್ವ ವಹಿಸಿ ಮಾತನಾಡಿದ ಅವರು ಕೋವಿಡ್‍ನಿಂದಾಗಿ ಶಾಲೆಗಳು ಮುಚ್ಚಿದ್ದು, ಶಾಲೆಗಳ ಅಡಳಿತ ಮಂಡಳಿಗಳು ಶಿಕ್ಷಕರಿಗೆ ವೇತನ ನೀಡಿಲ್ಲ. ಇದರಿಂದ ಶಿಕ್ಷಕರು ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿ ಉನ್ನತ ಶಿಕ್ಷಣ ಪಡೆದು ಸಿಕ್ಕ ಶಿಕ್ಷಕ ಹುದ್ದೆಯನ್ನು ನಂಬಿ ಸಾಲ ಮಾಡಿದ್ದಾರೆ. ಇನ್ನೂ ಕೆಲವರು ವಿವಾಹವಾಗಿ ಇಡೀ ಕುಟುಂಬದ ಜವಾಬ್ದಾರಿ ಹೊಣೆ ಹೊತ್ತಿದ್ದಾರೆ. ಸುಮಾರು 10 ತಿಂಗಳಿನಿಂದ ವೇತನವಿಲ್ಲದೇ ಖಾಸಗಿ ಶಿಕ್ಷಕರ ಬದುಕು ದುಸ್ತರವಾಗಿದೆ. ಶಿಕ್ಷಕ ವೃತ್ತಿಯನ್ನೇ ನಂಬಿಕೊಂಡಿದ್ದ ನನ್ನಂತಹ ಶಿಕ್ಷಕರ ಬಾಳು ಗೋಳು ಹೇಳ ತೀರದಾಗಿದೆ. ಕೊರೋನಾ ತುರ್ತುಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಜೀವನಕ್ಕೆ ತುರ್ತುಸ್ಥಿತಿ ಬಂದೊದಗಿದ್ದು, ಶಿಕ್ಷಣ ಸಚಿವರಾದ ಸುರೇಶ ಕುಮಾರ ಅವರು ಖಾಸಗಿ ಶಾಲೆಗಳ ಶಿಕ್ಷಕರ ನೆರವಿಗೆಂದು ಘೋಷಿಸಿದ ಹತ್ತು ಸಾವಿರ ಪರಿಹಾರ ಧನವನ್ನು ಶಿಕ್ಷಕರಿಗೆ ಒದಗಿಸಬೇಕು ಹಾಗೂ ಉಚ್ಚ ನ್ಯಾಯಾಲಯದ ಆದೇಶದ ಅನ್ವಯ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸೇವಾಭಧ್ರತೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರಾದ ರಮೇಶ ರಾಠೋಡ, ರಾಜು ಚವ್ಹಾಣ, ಅಂಬರೀಶ ಜಾಧವ, ಸಂಜೀವ ಜಾಧವ, ರೆಮೇಶ ಹೂವಿನಹಳ್ಳಿ, ರಮೇಶ ಯಳವಾರ, ಕೇಶವ ನಾಟೀಕಾರ, ಮಹ್ಮಮದ್ ಡಾಲಯತ್, ಮಹ್ಮಮದ್ ಹನೀಫ್, ತೋಪಿಕ್ ಮುನ್ನಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.