ಖಾಸಗಿ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ

ಬೀದರ:ಅ.29: ಜಿಲ್ಲೆಯಲ್ಲಿ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಪ್ರಯೋಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ಜಿಲ್ಲಾ ಸಂಚಾಲಕ ವಿಜಯಕುಮಾರ ಸೋನಾರೆ ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರಿಗೆ ಬರೆದ ಮನವಿಪತ್ರವನ್ನು ನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದರು.

ಕೊರೊನಾದಿಂದಾಗಿ ಕೆಲಸ ಇಲ್ಲದೆ ಸಂಕಷ್ಟದಲ್ಲಿ ಇರುವ ಬಡ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಕಲಾವಿದರು ಹಾಗೂ ಜನಸಾಮಾನ್ಯರಿಂದ ಖಾಸಗಿ ಆಸ್ಪತ್ರೆ ವೈದ್ಯರು ಹೆಚ್ಚು ಶುಲ್ಕ ಪಡೆಯುತ್ತಿದ್ದಾರೆ ಎಂದು ದೂರಿದರು.

ಉತ್ತರ ಭಾರತದಲ್ಲಿ ಒಮ್ಮೆ ಶುಲ್ಕ ಕೊಟ್ಟು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡರೆ, 10 ದಿನಗಳ ಒಳಗೆ ಮತ್ತೆ ವೈದ್ಯರನ್ನು ಭೇಟಿಯಾದರೂ ಶುಲ್ಕ ಪಡೆಯುವುದಿಲ್ಲ.
ಆದರೆ, ದಕ್ಷಿಣ ಭಾರತದಲ್ಲಿ ₹250 ಶುಲ್ಕ ಪಾವತಿಸಿ ತಪಾಸಣೆ ಮಾಡಿಸಿಕೊಂಡು, ಮರುದಿನ ಮತ್ತೆ ಆಸ್ಪತ್ರೆಗೆ ಹೋದರೆ ಪುನಃ ಶುಲ್ಕ ಕೊಡಬೇಕಾಗುತ್ತದೆ. ದೇಶದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಒಂದೇ ನಿಯಮ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.