ಖಾಸಗಿ ವಾಹನಗಳಿಂದ ದುಪ್ಪಟ್ಟು ವಸೂಲಿ

ರಸ್ತೆಗೆ ಇಳಿಯದ ಬಸ್, ಜನರಿಗೆ ಸಂಕಟ
ದೇವದುರ್ಗ,ಏ.೧೭- ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಆರನೇ ವೇತನ ಆಯೋಗ ಜಾರಿ ಮಾಡುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರ ಹೋರಾಟ ಶನಿವಾರ ೧೦ ನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿ ಶನಿವಾರ ನಡೆಯುವ ವಾರದ ಸಂತೆಗೆ ಅಕ್ಕಪಕ್ಕದ ತಾಲ್ಲೂಕು ಸೇರಿ ವಿವಿಧ ಹಳ್ಳಿಯ ಸಾವಿರಾರು ಜನರು ಪಟ್ಟಣಕ್ಕೆ ಬರುವುದು ಸಾಮಾನ್ಯ. ಆದರೆ ಈ ವಾರವೂ ಬಸ್ ಸಂಚಾರ ಬಂದ್ ಆಗಿದ್ದರಿಂದ, ಪ್ರಯಾಣಿಕರ ಜತೆ ವ್ಯಾಪಾರಿಗಳು ಕೂಡ ಸಂಕಷ್ಟ ಎದುರಿಸಿದರು. ಬಸ್ ನಿಲ್ದಾಣ ಪ್ರಯಾಣಿಕರು ಹಾಗೂ ಬಸ್ಸ್ ಇಲ್ಲದೆ ಬಿಕೋ ಎನ್ನುತ್ತಿತ್ತು. ಅನಿವಾರ್ಯವಾಗಿ ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ಪಟ್ಟಣಕ್ಕೆ ಬಂದರು. ಗ್ರಾಮೀಣ ಭಾಗಕ್ಕೆ ಆಟೋ, ಟಂಟಂಗಳೇ ಆಸರೆಯಾಗಿದ್ದವು.
ತಿಂಥಣಿ ಬ್ರಿಡ್ಜ್, ಸಿರವಾರ, ರಾಯಚೂರು, ಹಟ್ಟಿ, ಶಹಪುರ ಸೇರಿ ವಿವಿಧ ಮಾರ್ಗದಲ್ಲಿ ಸಂಚರಿಸಿದ ಖಾಸಗಿ ವಾಹನಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದವು. ಶಹಪೂರಗೆ ನೂರು ರೂ., ಜಾಲಹಳ್ಳಿಗೆ ೫೦ರೂ, ತಿಂಥಣಿ ಬ್ರಿಡ್ಜ್ ಗೆ ೧೦೦ರೂ, ರಾಯಚೂರಿಗೆ ೧೫೦ರೂ., ಅರಕೆರೆ ೫೦ರೂ, ಸಿರವಾರಗೆ ೧೦೦ರೂ. ಪಡೆಯುತ್ತಿರುವುದು ಕಂಡುಬಂದಿತು. ಬಸ್ ಇಲ್ಲದೆ ಸರ್ಕಾರಿ ಹಾಗೂ ಖಾಸಗಿ ನೌಕರರು ಅನಿವಾರ್ಯವಾಗಿ ದುಬಾರಿ ಬೆಲೆ ಕಟ್ಟಿ ಪ್ರಯಾಣಿಸಿದರು. ವಿದ್ಯಾರ್ಥಿಗಳು ಹಣ ಇಲ್ಲದೆ ಪರದಾಡಿದರೆ, ಇನ್ನು ಕೆಲವರು ಶಾಲೆಗೆ ಗೈರಾಗಿದ್ದರು.