ಖಾಸಗಿ ಬಸ್ ಮುಷ್ಕರಕ್ಕೆ ಪರಿಹಾರವಲ್ಲ

ಬಸವಕಲ್ಯಾಣ, ಏ. ೮- ಖಾಸಗಿ ಬಸ್‌ಗಳನ್ನು ಓಡಿಸುವ ಮೂಲಕ ಸಾರಿಗೆ ನೌಕರರ ಮುಷ್ಕರಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಸರ್ಕಾರಮಾತುಕತೆಗಳ ಮೂಲಕ ಸಾರಿಗೆ ಮುಷ್ಕರಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಬಸವಕಲ್ಯಾಣದ ಹಾರಕೂಡ ಮಠಕ್ಕೆ ಭೇಟಿ ನೀಡಿ ಡಾ. ಚನ್ನವೀರಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾರಿಗೆ ನೌಕರರ ಮುಷ್ಕರವನ್ನು ಗಂಭೀರವಾಗಿ ಪರಿಗಣಿಸಿ ನೌಕರರ ಜತೆ ಚರ್ಚಿಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಸಾರಿಗೆ ನೌಕರರ ಮುಷ್ಕರಕ್ಕೆ ಪರ್ಯಾಯವಾಗಿ ಖಾಸಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಎಷ್ಟು ದಿನ ಈ ರೀತಿ ಮಾಡಲು ಸಾಧ್ಯ. ನೌಕರರ ಜತೆ ಮಾತುಕತೆ ನಡೆಸಿ ಎಂದು ಅವರು ಹೇಳಿದರು.
ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ಸರ್ಕಾರ ಹಾಗೂ ನೌಕರರು ಅರ್ಥ ಮಾಡಿಕೊಳ್ಳಬೇಕು. ಮಾತುಕತೆಗಳ ಮೂಲಕ ಎಲ್ಲದ್ದಕ್ಕೂ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಈ ಸಮಸ್ಯೆ ಬಗೆಹರಿಸಲು ಮಾತುಕತೆ ನಡೆಸಬೇಕು. ಆದರೆ ಅವರು ಉಪಚುನಾವಣೆಯ ಪ್ರಚಾರದಲ್ಲಿದ್ದಾರೆ.
ಜನರ ಸಮಸ್ಯೆಗಳಿಗೆ ಆಧ್ಯತೆಯೋ, ಚುನಾವಣೆಗೆ ಆಧ್ಯತೆಯೋ ಇದನ್ನು ಸಾರಿಗೆ ಸಚಿವರು ಅರ್ಥ ಮಾಡಿಕೊಂಡು ಬೆಂಗಳೂರಿಗೆ ತೆರಳಿ ನೌಕರರ ಜತೆ ಮಾತನಾಡಲಿ ಎಂದು ಸಿದ್ಧರಾಮಯ್ಯ ಸಲಹೆ ಮಾಡಿದರು.