ಶಿವಮೊಗ್ಗ, ಜೂ. 14: ‘ಖಾಸಗಿ ಬಸ್ ಗಳಲ್ಲಿ ಪ್ರಯಾಣದ ವೇಳೆ ಹೆಚ್ಚಿನ ಶಬ್ದ
ಹೊರಹೊಮ್ಮುವ ಸ್ಪೀಕರ್ ಗಳಲ್ಲಿ ಹಾಡು ಹಾಕುವುದು, ಮಿತಿಮೀರಿದ ವೇಗದಲ್ಲಿ ಬಸ್
ಓಡಿಸಿದರೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್
ಜಿ. ಕೆ. ಎಚ್ಚರಿಕೆ ನೀಡಿದ್ದಾರೆ.
ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಸಮನಹಳ್ಳಿ ಹಾಗೂ ಎಣ್ಣೆಕೊಪ್ಪ
ಗ್ರಾಮಗಳಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಅವರು
ಮಾತನಾಡಿದರು.
ಮಿತಿಮೀರಿದ ವೇಗದಲ್ಲಿ ಚಾಲನೆ ಹಾಗೂ ಹೆಚ್ಚಿನ ಶಬ್ದ ಹೊರಹೊಮ್ಮುವ ಹಾಡುಗಳನ್ನು
ಹಾಕಿಕೊಂಡು ಬಸ್ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂಬ
ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಈ ಕುರಿತಂತೆ ನಿಯಮಿತವಾಗಿ ತಪಾಸಣೆ
ನಡೆಸಲಾಗುವುದು. ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಸಮಿತಿಗಳ ರಚನೆ: ಪ್ರತಿಯೊಂದು ಗ್ರಾಮದಲ್ಲಿ ಬೀಟ್ ಸಮಿತಿ ರಚನೆ ಮಾಡಲಾಗುವುದು.
ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಭೇಟಿ ನೀಡಿ ಸಮಿತಿಗಳ ಸಭೆ ನಡೆಸಲಿದ್ದಾರೆ. ಜೊತೆಗೆ
ಪ್ರತಿ ಗ್ರಾಮದಲ್ಲಿ ಯುವಕರನ್ನೊಳಗೊಂಡ ಯುವ ಪಡೆ ರಚಿಸಲಾಗುವುದು. ಯುವ ಪಡೆ ಸದಸ್ಯರು
ಬೀಟ್ ಪೊಲೀಸರೊಂದಿಗೆ ಗಸ್ತು ನಡೆಸಲಿದ್ದಾರೆ. ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳ
ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.
ದ್ವಿ ಚಕ್ರ ವಾಹನ ಸವಾರರು ಕೇವಲ ದಂಡ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಾತ್ರ
ಹೆಲ್ಮೆಟ್ ಧರಿಸದೆ, ತಮ್ಮ ರಕ್ಷಣೆಯ ದೃಷ್ಠಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.
ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳನ್ನು ಸಮಪರ್ಕವಾಗಿ ಪಾಲನೆ ಮಾಡಬೇಕು ಎಂದು
ಸಲಹೆ ನೀಡಿದರು.
ಬಾಲ್ಯ ವಿವಾಹ ಕಾನೂನು ರೀತ್ಯ ಅಪರಾಧವಾಗಿದೆ. ಬಾಲ್ಯ ವಿವಾಹ ನಡೆಸಿದವರ ವಿರುದ್ದ
ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಯಾವುದೇ ಅಗತ್ಯ ಮತ್ತು ತುರ್ತು
ಸಂದರ್ಭದಲ್ಲಿ ERSS – 112 ಸಹಾಯವಾಣಿಗೆ ಕರೆ ಮಾಡಿದರೆ, ತತ್’ಕ್ಷಣವೇ ಪೊಲೀಸ್
ನೆರವು ದೊರಕಲಿದೆ ಎಂದು ಇದೇ ವೇಳೆ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ, ಪೊಲೀಸ್ ಉಪಾಧೀಕ್ಷಕರು, ಸರ್ಕಲ್
ಇನ್ಸ್ಪೆಕ್ಟರ್ ರಾಜಶೇಖರ್, ಸಬ್ ಇನ್ಸ್’ಪೆಕ್ಟರ್ ಗಳಾದ ರಾಜು ರೆಡ್ಡಿ, ಅಗಾಸೆ
ಮೊದಲಾದವರಿದ್ದರು.