ಖಾಸಗಿ ಜೆಟ್‌ಗೆ ಕುಸಿದ ಬೇಡಿಕೆ

ನವದೆಹಲಿ, ಡಿ.೩೧- ದೇಶದಲ್ಲಿ ಕೋವಿಡ್ ಸಮಯದಲ್ಲಿ ಖಾಸಗಿ ಜೆಟ್ ವಿಮಾನ, ಹೆಲಿಕ್ಟಾಪ್ಟರ್ ಬೇಡಿಕೆ ಗಗನಕ್ಕೇರಿತ್ತು.ಇದೀಗ ಈ ಬೇಡಿಕೆ ಕಡಿಮೆಯಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ವಿಷಯ ತಿಳಿಸಿದೆ.
ಕೋವಿಡ್ ಸಮಯದಲ್ಲಿ ಜೆಟ್ ವಿಮಾನ ಮತ್ತು ಹೆಲಿಕ್ಟಾಪ್ಟರ್‌ಗಳ ಬೇಡಿಕೆ ಅಗತ್ಯಕ್ಕಿಂತ ಹೆಚ್ಚಾಗಿತ್ತು.ಈಗ ಆ ಪ್ರಮಾಣ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದೆ ಎಂದು ತನ್ನ ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಂಗ್ರಹಿಸಿದ ಮಾಹಿತಿ ಅನ್ವಯ,ಖಾಸಗಿ ಜೆಟ್‌ಗಳು ಮತ್ತು ಹೆಲಿಕಾಪ್ಟರ್‍ಗಳ ಹಾರಾಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಶೇಕಡಾ ೧೬.೫ ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ.
ಕೋವಿಡ್-೧೯ ಸಾಂಕ್ರಾಮಿಕ ರೋಗ ಕ್ಷೀಣಿಸುತ್ತಿದ್ದಂತೆ, ಭಾರತದ ಶ್ರೀಮಂತರು ಮತ್ತು ಗಣ್ಯವ್ಯಕ್ತಿಗಳು ಖಾಸಗಿ ವಿಮಾನಗಳ ಮಿತಿ ತೊರೆದು ವಾಣಿಜ್ಯ ವಿಮಾನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಖಾಸಗಿ ಜೆಟ್‌ಗಳ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಈ ವಿಷಯವನ್ನು ತಿಳಿಸಿದೆ.
ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ಶ್ರೀಮಂತರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಬೆಳೆಸಲು ವಾಣಿಜ್ಯ ವಿಮಾನ ಬಳಕೆ ಕೈ ಬಿಟ್ಟು ಖಾಸಗಿ ಜೆಟ್ ಮತ್ತು ಹೆಲಿಕ್ಟಾಪ್ಟರ್ ಮೊರೆ ಹೋಗಿದ್ದರು. ಇದೀಗ ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾದಂತೆ ಖಾಸಗಿ ಜೆಟ್ ಬಳಕೆ ಮಾಡುವ ಶ್ರೀಮಂತರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.
ಖಾಸಗಿ ವಿಮಾನ ಮತ್ತು ಜೆಟ್ ವಿಮಾನಗಳ ಹಾರಾಟ ೨೦೨೦ ರ ಇದೇ ಅವಧಿಗೆ ಹೋಲಿಸಿದರೆ ಕಳೆದ ವರ್ಷ ಏಪ್ರಿಲ್-ನವೆಂಬರ್‍ನಲ್ಲಿ ಶೇಕಡಾ ೪೮.೪ ರಷ್ಟು ಸಂಚಾರ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಸಾಂಕ್ರಾಮಿಕ ರೋಗಕ್ಕೆ ಮುನ್ನ ೨೦೧೯ ರ ಏಪ್ರಿಲ್-ನವೆಂಬರ್‍ನಲ್ಲಿ ದೇಶಾದ್ಯಂತದ ವಿಮಾನ ನಿಲ್ದಾಣಗಳು ಒಟ್ಟು ೧,೭೮,೮೬೦ ಸಾಮಾನ್ಯ ವಾಯುಯಾನ ವಿಮಾನಗಳ ಹಾರಾಟ ನಡೆಸಿದ್ದವು.
೨೦೨೦ರ ಏಪ್ರಿಲ್-ನವೆಂಬರ್ ೨೦೨೦ ಸಾಂಕ್ರಾಮಿಕ ರೋಗದ ಮೊದಲ ವರ್ಷ, ಲಾಕ್‌ಡೌನ್‌ಗಳು ಮತ್ತು ಇತರ ನಿರ್ಬಂಧ ತೆಗೆದುಹಾಕಿದ ನಂತರ ವರ್ಷದ ದ್ವಿತೀಯಾರ್ಧದಲ್ಲಿ ಮಾತ್ರ ಪ್ರಯಾಣ ಪ್ರಾರಂಭವಾದರೂ, ಅಂತಹ ೧,೨೮,೧೮೦ ಹಾರಾಟ ನಡೆದಿತ್ತು.
೨೦೨೧ರ ಏಪ್ರಿಲ್-ನವೆಂಬರ್ ತಿಂಗಳವರೆಗೆ ೧,೯೦,೫೮೦ ಕ್ಕೆ ಏರಿತು, ಆದರೆ ಏಪ್ರಿಲ್-ನವೆಂಬರ್ ೨೦೨೨ ರಲ್ಲಿ ೧,೫೯,೧೩೦ ಕ್ಕೆ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.