ಖಾಸಗಿ ಕಂಪ್ಯೂಟರ್ ತರಬೇತಿ ಸಂಸ್ಥೆಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹ

ಕಲಬುರಗಿ:ಜೂ.3: ವಿಧ್ಯಾರ್ಥಿಗಳ ಭವಿಷ್ಯಕ್ಕೆ ಆಸರೆಯಾಗಿದ್ದ ಶೈಕ್ಷಣಿಕ ಸಂಸ್ಥೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳು ಹಾಗೂ ಕಂಪ್ಯೂಟರ್ ತರಬೇತಿ ಸಂಸ್ಥೆಗಳ ಕಾರ್ಯಚಟುವಟಿಕೆಗಳು ನಿಷ್ಕ್ರಿಯವಾಗಿರುವ ಕಾರಣ ವಿದ್ಯಾರ್ಥಿಗಳ ಜ್ಞಾನ ವಿಕಸನಕ್ಕೆ ಸಾಧ್ಯವಾಗುತ್ತಿಲ್ಲ. ಈ ಕುರಿತು ಇದರ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಿ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ರಾಜ್ಯದ ಬಹುತೇಕ ಶೈಕ್ಷಣಿಕ ಸಂಸ್ಥೆಗಳ ಹಾಗೂ ತರಬೇತಿ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ನಿಂತಿರುವ ಕಾರಣ ಸಾವಿರಾರು ಮಂದಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ವಿದ್ಯಾರ್ಥಿಗಳು ಕೇವಲ ಮನೆಯಲ್ಲಿಯೇ ಇದ್ದು ಮಾನಸಿಕ ಮತ್ತು ದೈಹಿಕ ವಿಕಸನಕ್ಕೆ ಸಾಧ್ಯವಾಗದ ಕಾರಣ ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರು ಚಿಂತಿಸುವಂತಾಗಿದೆ. ಅಲ್ಲದೇ ತರಬೇತಿ ಸಂಸ್ಥೆಗಳನ್ನು ನಡೆಸುತ್ತಿದ್ದ ಮಾಲೀಕರು ಅವುಗಳ ನಿರ್ವಹಣೆಗೆ ಸಾಧ್ಯವಾಗದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಅಲ್ಲದೇ ಸಂಕಷ್ಟದಲ್ಲಿರುವ ಸಂಸ್ಥೆಯವರು ಹಾಗೂ ಅವುಗಳಲ್ಲಿ ಕಾಯನಿರ್ವಹಿಸುತ್ತಿರುವ ಸಾವಿರಾರು ಮಂದಿ ಶಿಕ್ಷಕರು ಮತ್ತು ಸಿಬ್ಬಂದಿಗಳ ಬದುಕು ದುಸ್ತರವಾಗಿದೆ.ಸರಕಾರವು ಇದರ ಬಗ್ಗೆ ಅವಲೋಕನ ಮಾಡಿ ಶೈಕ್ಷಣಿಕ ಹಾಗೂ ತರಬೇತಿ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತಿದ್ದವರಿಗೆ ಮತ್ತು ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.