ಖಾಸಗಿ ಅಂಗಡಿಗಳಿಗೆ ರಿಮ್ಸ್ ಔಷಧಿ ಮಾರಾಟ ಪ್ರಕರಣ : ಇಬ್ಬರು ಅಮಾನತು – ಕರಾಳ ದಂಧೆಗೆ ನಿದರ್ಶನ

 • ಮೇಲಾಧಿಕಾರಿಗಳ ಪಾಲುದಾರಿಕೆ ಬಗ್ಗೆ ಶಂಕೆ : ಉನ್ನತ ಮಟ್ಟದ ತನಿಖೆಗೆ ಆದೇಶಿಸಿದರೆ ಮತ್ತಷ್ಟು ಕರ್ಮಕಾಂಡ ಬಹಿರಂಗ ಸಾಧ್ಯ
  ರಾಯಚೂರು.ಸೆ.೨೦- ಬಡ ರೋಗಿಗಳ ಉಪಚಾರಕ್ಕಾಗಿ ಸರ್ಕಾರ ಪೂರೈಸಿದ ಗುಣಮಟ್ಟದ ಔಷಧಿ, ಖಾಸಗಿ ಔಷಧಿ ಅಂಗಡಿಗಳಿಗೆ ಮಾರಾಟ ದಂಧೆಗೆ ಸಂಬಂಧಿಸಿ ರಿಮ್ಸ್ ಆಸ್ಪತ್ರೆಯ ಇಬ್ಬರು ಅಧಿಕಾರಿಗಳ ಅಮಾನತ್ತು ಪ್ರಕರಣ ಅಲ್ಲಿಯ ಅಕ್ರಮ ದಂಧೆ ಸಾಬೀತು ಪಡಿಸಿದಂತಾಗಿದೆ.
  ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯೆ, ಅತ್ಯಂತ ಬೆಲೆ ಬಾಳುವ ವೈದ್ಯಕೀಯ ಸಾಮಾಗ್ರಿ ಧೂಳಿನಲ್ಲಿ ಸಂಗ್ರಹಿಸಲಾಗಿತ್ತು. ಹಾಗೂ ಕೊರೊನಾದ ಆಪತ್ತಿನ ಸಂದರ್ಭದಲ್ಲೂ ರೋಗಿಗಳಿಗೆ ಔಷಧಿ ನೀಡದೆ, ಖಾಸಗಿ ಔಷಧಿ ಅಂಗಡಿಯಿಂದ ಖರೀದಿಸುವ ಹಾಗೂ ವಿವಿಧ ಖಾಸಗಿ ತಪಾಸಣಾ ಕೇಂದ್ರಗಳಿಂದ ವರದಿ ತರಲು ಬಡ ರೋಗಿಗಳಿಗೆ ಸೂಚಿಸಲಾಗುತ್ತಿದೆ. ಈ ಎಲ್ಲಾ ಹರಗಣಗಳ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿಯಾಗಿದ್ದರೂ, ರಿಮ್ಸ್ ಮೇಲಾಧಿಕಾರಿಗಳು ಈ ಬಗ್ಗೆ ಕ್ಯಾರೆ ಎನ್ನದ ನಿರ್ಲಕ್ಷ್ಯ ಆಡಳಿತದಲ್ಲಿ ತೊಡಗಿದ್ದರು.
  ಆದರೆ, ಬಳ್ಳಾರಿಯ ವಿಮ್ಸ್ ಪ್ರಕರಣ ನಂತರ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚಿದ ನಿಗಾ ಅಕ್ರಮ ಔಷಧಿಗಳ ವ್ಯವಹಾರಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಮೇಲಾಧಿಕಾರಿಗಳು ತಮ್ಮನ್ನು ಬಚಾವ್ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅಕ್ರಮವಾಗಿ ಖಾಸಗಿ ಅಂಗಡಿಗಳಿಗೆ ಔಷಧಿ ಮಾರಾಟ ಮಾಡುವ ಪ್ರಕರಣಕ್ಕೆ ಸಂಬಂಧಿಸಿ ವೈದ್ಯ ಶಾಸ್ತ್ರದ ಕಿರಿಯ ಸ್ಥಾನಿಕ ಅಧಿಕಾರಿ ಅಮಿತ್ ಕುಮಾರ ಮತ್ತು ಫಾರ್ಮಾಸಿಸ್ಟ್ ಅವರನ್ನು ಮೃತ್ಯುಂಜಯ ಎಂಬುವವರನ್ನು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಔಷಧಿ ಮಾರಾಟ ಮಾಡುವ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ.
  ಆದರೆ, ಇದರ ಹಿಂದೆ ಇರುವ ಮೇಲಾಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಲ್ಲಿಯ ರೋಗಿಗಳಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬಹುತೇಕ ವೈದ್ಯರು ತಮ್ಮ ಸಹಾಯಕರೊಂದಿಗೆ ಈ ಆಸ್ಪತ್ರೆ ನಿರ್ವಹಿಸುವಂತಹ ದಂಧೆ ನಡೆಸುತ್ತಿದ್ದಾರೆ. ಬಡ ರೋಗಿಗಳಿಗೆ ಯಾವುದೇ ಕಾರಣಕ್ಕೂ ಔಷಧಿಯನ್ನು ಹೊರಗಿನಿಂದ ಖರೀದಿಸಲು ಚೀಟಿ ಬರೆಯುವುದು ಅಪರಾಧವಾಗಿದ್ದರೂ, ಭಯವಿಲ್ಲದೆ, ರಿಮ್ಸ್ ಅಧಿಕಾರಿಗಳು ಬಿಂದಾಸ್ ಆಗಿ ರೋಗಿಗಳಿಗೆ ಹೊರಗಿನಿಂದ ಔಷಧಿ ತರಲು ರೋಗಿಗಳಿಗೆ ಚೀಟಿ ಬರೆದುಕೊಡುವ ಮೂಲಕ ಬಡ ರೋಗಿಗಳಿಗೆ ವಂಚಿಸಲಾಗುತ್ತಿತ್ತು.
  ಕೆಳ ಮಟ್ಟದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದರೆ, ಈ ಪ್ರಕರಣ ಇಲ್ಲಿಗೆ ಸ್ಥಗಿತಗೊಳ್ಳುವುದೆ?. ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ರೂ. ಔಷಧಿಯನ್ನು ಖಾಸಗಿ ಔಷಧಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರೂ, ಮೇಲಾಧಿಕಾರಿಗಳಿಗೆ ಮಾಹಿತಿಯಿರಲಿಲ್ಲವೇ?. ಆಸ್ಪತ್ರೆಗೆ ಪೂರೈಕೆಯಾದ ಔಷಧಿ ಎಷ್ಟು ಮತ್ತು ರೋಗಿಗಳಿಗೆ ಹಂಚಿಕೆಯಾದ ಔಷಧಿ ಎಷ್ಟು ಎನ್ನುವ ದಾಖಲೆಗಳನ್ನು ಮೇಲಾಧಿಕಾರಿಗಳು ಏಕೆ ಪರಿಶೀಲಿಸಲಿಲ್ಲ. ಜಿಲ್ಲಾಡಳಿತ ಪ್ರತಿ ತಿಂಗಳು ನಡೆಸುವ ಸಭೆಯಲ್ಲಿ ಔಷಧಿಗಳ ಲೆಕ್ಕಪತ್ರದ ಬಗ್ಗೆ ಏಕೆ ವಿಚಾರಣೆ ನಡೆಸಲಿಲ್ಲ.
  ಈ ಅಕ್ರಮ ವ್ಯವಹಾರದಲ್ಲಿ ಕೆಳ ಮಟ್ಟದಿಂದ ಮೇಲ್ಮಟ್ಟದವರೆಗೂ ಪ್ರಭಾವಿಗಳು ಶಾಮೀಲಿದ್ದಾರೆ ಎನ್ನುವುದು ಈಗ ಈ ಇಬ್ಬರ ಅಧಿಕಾರಿಗಳ ಅಮಾನತಿನಿಂದ ಸ್ಪಷ್ಟವಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸರಿಯಾದ ಔಷಧಿ, ಉಪಚಾರ ದೊರೆಯದೆ, ಅಸಹಜ ಸಾವಿನ ಪ್ರಕರಣ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ. ಉನ್ನತ ಮಟ್ಟದ ತನಿಖಾ ತಂಡಕ್ಕೆ ಈ ಕುರಿತು ಆದೇಶಿಸಿದ್ದರೆ, ರೋಗಿಗಳು ರಿಮ್ಸ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಸೇರಿದಂತೆ ಅಲ್ಲಿಯ ನರಕ ವ್ಯವಸ್ಥೆ ಬಗ್ಗೆಯೂ ಸಂಪೂರ್ಣ ಸಾಕ್ಷಾಧಾರಗಳೊಂದಿಗೆ ಮಾಹಿತಿ ನೀಡಲಿದ್ದಾರೆ.
  ಅಲ್ಲದೆ, ಸಂಬಂಧಿಗಳ ಸಾವು, ನೋವಿನ ಘಟನೆಗಳ ಬಗ್ಗೆಯೂ ಸಾಕ್ಷಿ ಸಮೇತ ಮಾಹಿತಿ ನೀಡುವ ಆಕ್ರೋಶದಲ್ಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೆಮ್ಡಿಸೀವರ್ ಮಾರಾಟ ಪ್ರಕರಣದಲ್ಲಿ ರಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರು ಭಾಗೀಯಾದಂತಹ ಘಟನೆಯಿಂದ ಅಮಾನತುಗೊಳಿಸಿದಂತಹ ಪ್ರಕರಣ ಅಲ್ಲಿಯ ಔಷಧಿ ಅಕ್ರಮ ವ್ಯವಹಾರಕ್ಕೆ ಮತ್ತೊಂದು ನಿದರ್ಶನವಾಗಿದೆ. ಬಡವರ ಜೀವ ರಕ್ಷಣೆಗಾಗಿ ಸರ್ಕಾರ ನೀಡುವ ಔಷಧಿ ಮಾರಾಟ ಮಾಡುವಂತಹ ಅಮಾನವೀಯ ಆಡಳಿತ ವ್ಯವಸ್ಥೆ ರಿಮ್ಸ್‌ನಲ್ಲಿದೆ.
  ಕೊರೊನಾದಲ್ಲಿ ರಿಮ್ಸ್ ಆಸ್ಪತ್ರೆಯಲ್ಲಿ ಸರಿ ಸುಮಾರು ಸಾವಿರ ರೋಗಿಗಳು ಮೃತಪಟ್ಟಂತಹ ಘಟನೆ ಅಲ್ಲಿಯ ವೈದ್ಯಕೀಯ ವ್ಯವಸ್ಥೆಗೆ ಕನ್ನಡಿಯಾಗಿತ್ತು. ಅತ್ಯಂತ ಅಗತ್ಯ ಔಷಧಿ ಖಾಸಗಿ ಅವರಿಗೆ ಮಾರಾಟ ಮಾಡುವ ಮೂಲಕ ಬಡ ರೋಗಿಗಳಿಂದ ಹಣ ಲೂಟಿ ಮಾಡುವ ರಿಮ್ಸ್ ಆಸ್ಪತ್ರೆಯ ಅವ್ಯವಹಾರದ ವಿರುದ್ಧ ತನಿಖೆ ಕೈಗೊಂಡರೆ, ಇಲ್ಲಿಯ ಅಕ್ರಮ ಬಹಿರಂಗಗೊಳ್ಳಲಿದೆ. ವೈದ್ಯಕೀಯ ಸೌಕರ್ಯ ಮತ್ತು ಔಷಧಿ ಪೂರೈಕೆ ಕೊರತೆಯಿಂದ ರೋಗಿಗಳು ಸಾಯುವವರೆಗೂ ಕಾಯದೆ, ತಕ್ಷಣವೇ ರಾಜ್ಯ ಸರ್ಕಾರ ರಿಮ್ಸ್ ಆಸ್ಪತ್ರೆ ಔಷಧಿ ಮಾರಾಟ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಅಗತ್ಯವಿದ್ದು, ಸರ್ಕಾರ ಇದನ್ನು ನಿರ್ಲಕ್ಷ್ಯಿಸಿದರೆ, ವಿಮ್ಸ್ ಮಾದರಿಯಲ್ಲಿ ಇಲ್ಲಿಯೂ ರೋಗಿಗಳ ಸಾವಿನ ಘಟನೆಗಳು ಸಂಭವಿಸಿದ್ದಲ್ಲಿ, ಇದಕ್ಕೆ ಸ್ವತಃ ನೇರವಾಗಿ ಸರ್ಕಾರವೇ ಹೊಣೆಯಾಗಲಿದೆ.