ಖಾಸಗಿಯವರಿಂದ ಲಸಿಕೆ ತರಿಸಿಕೊಳ್ಳಿ

ಬೆಂಗಳೂರು, ಜೂ. ೭- ಕಾಂಗ್ರೆಸ್ ಪಕ್ಷದವರು ಲಸಿಕೆ ನೀಡಲು ಬಯಸುವುದಾದರೆ ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆ ಮಾಡಿಕೊಂಡು ಖಾಸಗಿಯವರಿಂದ ಲಸಿಕೆ ತರಿಸಿಕೊಳ್ಳಲಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಕಾಂಗ್ರೆಸ್‌ನ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಇದೇ ರೀತಿ ಲಸಿಕೆ ತರಿಸಿಕೊಂಡು ಕ್ಷೇತ್ರದ ಜನತೆಗೆ ನೀಡುತ್ತಿದ್ದಾರೆ. ಇದನ್ನೇ ವಿರೋಧ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ಅಧ್ಯಕ್ಷರು ಮಾಡಲಿ ಎಂದು ಲಸಿಕೆ ಖರೀದಿಗೆ ಡಿ.ಕೆ. ಶಿವಕುಮಾರ್ ಅನುಮತಿ ಕೋರಿರುವ ಬಗ್ಗೆ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.
ಆದಷ್ಟು ಬೇಗ ಎಲ್ಲರಿಗೂ ಲಸಿಕೆ ಸಿಗಬೇಕು ಎಂಬುದು ನಮ್ಮ ಉದ್ದೇಶ. ಹೆಚ್ಚು ಲಸಿಕೆಯನ್ನು ತರಿಸಿಕೊಳ್ಳುತ್ತಿದ್ದೇವೆ. ಲಸಿಕೆ ಸಿಗದಿದ್ದರೆ ಒಂದೂವರೆ ಕೋಟಿ ಜನರಿಗೆ ಲಸಿಕೆ ಆಗುತ್ತಿರಲಿಲ್ಲ ಎಂದರು.
ಈ ತಿಂಗಳಲ್ಲಿ ಖಾಸಗಿ ಆಸ್ಪತ್ರೆಯವರು ೨೪,೦೪೬ ಸಾವಿರ ಡೋಸ್‌ಗೆ ಬೇಡಿಕೆ ಇಟ್ಟಿದ್ದರು. ನಿನ್ನೆ ೧೫,೯೫೨೦ಡೋಸ್ ಬಂದಿದೆ. ಈ ತಿಂಗಳಾಂತ್ಯಕ್ಕೆ ೭೦ ಲಕ್ಷದಷ್ಟು ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದರು.
ಅನ್‌ಲಾಕ್ ಬಗ್ಗೆ ಇಂದು ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಇದೆ.ಅಲ್ಲಿ ತೀರ್ಮಾನ ಮಾಡುತ್ತೇವೆ ಎಂದರು. ೩ನೇ ಅಲೆಯನ್ನು ತಡೆಯಲು ಸಿದ್ಧತೆಗಳು ನಡೆದಿವೆ. ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿಯಾಧರಿಸಿ ಪೂರ್ವ ಸಿದ್ಧತೆ ಮಾಡುತ್ತೇವೆ ಎಂದು ಅವರು ಹೇಳಿದರು.