ಖಾಶೆಂಪುರ್ ಪಿ: ಅದ್ದೂರಿಯಾಗಿ ನಡೆದ ಗ್ರಾಮ ದೇವತೆ ಜಾತ್ರಾ ಮಹೋತ್ಸವ

ಬೀದರ್ ಆ.09: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ (ಪಾನ್ ಖಾಶೆಂಪುರ್) ಗ್ರಾಮದಲ್ಲಿ ಮಂಗಳವಾರ ಗ್ರಾಮ ದೇವತೆ ಮರಗೆಮ್ಮ ತಾಯಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದ್ದು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಸ್ವಗ್ರಾಮದವರಾದ ಬಂಡೆಪ್ಪ ಖಾಶೆಂಪುರ್ ರವರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರತಿವರ್ಷವೂ ನಡೆಯುವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಖಾಶೆಂಪುರ್ ಪಿ ಗ್ರಾಮಸ್ಥರು ಬೆಳಗ್ಗೆಯಿಂದಲೇ ಸಿದ್ಧತೆ ಆರಂಭಿಸಿ, ಸಂಜೆ ವೇಳೆಗೆ ಗ್ರಾಮ ದೇವತೆಯ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಕಾರ್ಯಕ್ರಮ ನೆರವೇರಿಸಿದರು.

ಒಂದೇ ದಿನದಲ್ಲೇ ತಯಾರಾಗುವ ಮೂರ್ತಿಗಳು:

ಖಾಶೆಂಪುರ್ ಪಿ ಗ್ರಾಮದ ಗ್ರಾಮ ದೇವತೆ ಮರಗೆಮ್ಮ ದೇವಿಯ ಮೂರ್ತಿಗಳನ್ನು ಜಾತ್ರಾ ಮಹೋತ್ಸವ ದಿನದಂದೇ ಒಂದೇ ದಿನದಲ್ಲೇ ತಯಾರಿಸುವ ಸಂಪ್ರದಾಯ ಜಾರಿಯಲಿದ್ದು, ಈ ವರ್ಷವೂ ಮಂಗಳವಾರ ಬೆಳಗ್ಗೆ ಗ್ರಾಮಸ್ಥರು ಮರದ ತುಕಡಿಗಳನ್ನು ಗ್ರಾಮದ ಬಡಿಗೇರ ಮನೆಗಳಿಗೆ ನೀಡಿದರು.

ಅವುಗಳಿಂದ ಸಂಜೆಯವರೆಗೂ ಬಡಿಗೇರು ಮೂರ್ತಿಗಳನ್ನು ತಯಾರಿಸಿದರು. ತಯಾರಾದ ಮೂರ್ತಿಗಳನ್ನು ಸಂಜೆಯ ವೇಳೆಯಲ್ಲಿ ಗ್ರಾಮಸ್ಥರು ಬಡಿಗೇರ ಮನೆಯಿಂದ ಬಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆಯಲ್ಲಿ ತಂದು ಮರಗೆಮ್ಮ ದೇವಿಯ ಮಂದಿರದಲ್ಲಿ ಪ್ರತಿಷ್ಠಾಪಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯಕುಮಾರ್ ಖಾಶೆಂಪುರ್, ಬಾಬು ಮಾರುತಿ ಖಾಶೆಂಪುರ್, ಮಾರುತಿ ವಗ್ಗೆ, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ಮಾರುತಿ ಬಸಗೊಂಡ, ಶರಣಪ್ಪ ಚಿಂಚೋಳಿ, ಲಕ್ಷ್ಮಣ ಹೊಸಳ್ಳಿ, ಸುನೀಲ್ ಗುಮಾಸ್ತಿ, ಸಂಜುಕುಮಾರ್ ಗುಮಾಸ್ತಿ, ಅಶೋಕ ಶರಗಾರ, ಆನಂದ ಖಾಶೆಂಪುರ್, ವಿಶ್ವನಾಥ ಬಾಲೇಬಾಯಿ, ಯೋಗೇಶ್ ವಗ್ಗೆ, ಶಿವಕುಮಾರ್ ಬಾಲೇಬಾಯಿ ಸೇರಿದಂತೆ ಖಾಶೆಂಪುರ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಸಾವಿರಾರು ಸಂಖ್ಯೆಯಲ್ಲಿದ್ದರು.