ಖಾಲಿ ನಿವೇಶನ ಶೀಘ್ರದಲ್ಲಿಯೇ ಹಂಚಿಕೆ: ಬಳ್ಳಾರಿ

ಬ್ಯಾಡಗಿ,ಜು.23: ಪಟ್ಟಣದ ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ಆಶ್ರಯ ನಿವೇಶನಕ್ಕಾಗಿ ಮಂಜೂರಾಗಿರುವ 10ಎಕರೆಯಲ್ಲಿ ಪ್ರತಿ ಕುಟುಂಬಕ್ಕೆ 20ಘಿ30 ಅಳತೆಯ (600 ಚೌ.ಫೂಟ) ಖಾಲಿ ನಿವೇಶನವನ್ನು ಶೀಘ್ರದಲ್ಲಿಯೇ ಹಂಚಿಕೆ ಮಾಡುವುದಾಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ಪುರಸಭೆ ಸಭಾಭವನದಲ್ಲಿ ಜರುಗಿದ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಟ್ಟಣದ ಬಡ ಕುಟುಂಬದ ಜನರಿಗೆ ನಿವೇಶನ ಹಂಚುವ ಸಲುವಾಗಿ 10ಎಕರೆ ಭೂಮಿ ಮಂಜೂರಾಗಿದ್ದು, ಇದರಲ್ಲಿ ಸುಮಾರು 225ಕ್ಕೂ ಹೆಚ್ಚು ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದಾಗಿ ಹೇಳಿದರಲ್ಲದೇ, ಬಡವರನ್ನು ಗುರ್ತಿಸುವ ಜವಾಬ್ದಾರಿ ಆಯಾ ವಾರ್ಡುಗಳ ಸದಸ್ಯರಿಗೆ ಮೇಲಿದ್ದು, ಎಲ್ಲ ಸದಸ್ಯರು ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆಗೆ ಮುಂದಾಗಬೇಕು. ಈಗಾಗಲೇ ಮಲ್ಲೂರ ರಸ್ತೆಯಲ್ಲಿರುವ ಪುರಸಭೆಯ ಬಡಾವಣೆಯಲ್ಲಿ ಜಿಪ್ಲಸ್1 ಮಾದರಿ ಮನೆಗಳ ನಿರ್ಮಾಣಕ್ಕೆ 633 ಫಲಾನುಭವಿಗಳು ತಲ್ಲಾ 30ಸಾವಿರ ರೂಗಳನ್ನು ತುಂಬಿದ್ದು, ಮನೆಗಳನ್ನು ನಿರ್ಮಿಸಲು ಡಿಪಿಆರ್ ಸಿದ್ಧವಾಗಿದೆ. ಹಣ ಬಿಡುಗಡೆಯಾದ ಕೂಡಲೇ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
ಮುಖ್ಯಾಧಿಕಾರಿ ಏಸು ಬೆಂಗಳೂರು ಮಾತನಾಡಿ, ಪಟ್ಟಣದಲ್ಲಿರುವ ಖಾಲಿ ನಿವೇಶನಗಳಲ್ಲಿ ಗಿಡಮರ ಸೇರಿದಂತೆ ಕಸಕಡ್ಡಿಗಳ ಸಂಗ್ರಹಣೆ ಯಥೇಚ್ಚ ನಡೆಯುತ್ತಿದೆ, ಈ ಕುರಿತು ನಿವೇಶನ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದರೂ ಸಹ ಸರಿಯಾದ ಸ್ಪಂದನೆ ನೀಡುತ್ತಿಲ್ಲ, ಇಂತಹ ನಿವೇಶನಗಳ ಮೇಲೆ ಪುರಸಭೆ ಭೋಜಾ ನಮೂದಿಸಲು ಕಾನೂನಿನಲ್ಲಿ ಅವಕಾಶವಿದ್ದು, ಇದಕ್ಕೆ ಸಭೆಯ ಅನುಮತಿ ಕೋರಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿದ್ದ ಸರ್ವ ಸದಸ್ಯರು ಒಮ್ಮತವನ್ನು ವ್ಯಕ್ತಪಡಿಸಿದರು.
ಸ್ಥಾಯಿಸಮಿತಿ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಸಂತೆ ಮೈದಾನ, ಬಸ್ ನಿಲ್ದಾಣ, ತಾಲೂಕಾ ಕ್ರೀಡಾಂಗಣ ಸೇರಿದಂತೆ ಪಟ್ಟಣದ ಹೊರವಲಯದ ಖಾಲಿ ನಿವೇಶನಗಳು ಸಂಜೆಯಾದ ತಕ್ಷಣ ಬಾರ್‍ಗಳಾಗಿ ಪರಿವರ್ತನೆ ಗೊಳ್ಳುತ್ತಿವೆ, ಸದರಿ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆ ಯಥೇಚ್ಚವಾಗಿ ನಡೆಯುತ್ತಿದ್ದು, ಸಾರ್ವಜನಿಕರ ಸುರಕ್ಷತೆತ ದೃಷ್ಟಿಯಿಂದ ಕೂಡಲೇ ಕ್ಯಾಮರಾ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ ವಹಿಸಿದ್ದರು, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸದಸ್ಯರಾದ ಬಸವಣ್ಣೆಪ್ಪ ಛತ್ರದ, ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಮಂಜಣ್ಣ ಬಾರ್ಕಿ, ಫಕ್ಕೀರಮ್ಮ ಛಲವಾದಿ, ಕಲಾವತಿ ಬಡಿಗೇರ
ಸುಭಾಸ್ ಮಾಳಗಿ. ಚಂದ್ರಣ್ಣ ಶೆಟ್ಟರ, ಜಮೀಲಾಬಿ ಹೆರಕಲ್, ರೇಷ್ಮಾಬಾನು ಶೇಖ್, ಮಂಗಳ ಗೆಜ್ಜೆಳ್ಳಿ, ಮೆಹಬೂಬ್ ಅಗಸನಹಳ್ಳಿ, ಮಲ್ಲಮ್ಮ ಪಾಟೀಲ, ಹನುಮಂತಪ್ಪ ಮ್ಯಾಗೇರಿ, ಗಣೇಶ ಅಚಲಕರ, ಗಿರಿಜಾ ಪಟ್ಟಣಶೆಟ್ಟಿ, ಪ್ರೇಮಾ ಬೆನ್ನೂರ, ಹನುಮಂತಪ್ಪ ಕೋಡಿಹಳ್ಳಿ, ಕಮಲವ್ವ ಕುರಕುಂದಿ, ಶಿವರಾಜ ಅಂಗಡಿ, ಮಹ್ಮದ್ ರಫೀಕ್ ಮುದಗಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.