ಖಾಲಿ ಗಾಡಾ ಸ್ಪರ್ಧೆ

ನವಲಗುಂದ,ಏ4 : ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸುವ ಮೂಲಕ ರೈತರು ಸಂತಸ ಪಟ್ಟರು.

ಸ್ಪರ್ಧೆಯಲ್ಲಿ ಹಳೇಹುಬ್ಬಳ್ಳಿಯ ಸಿದ್ಧಾರೂಢ ಪ್ರಸನ್ನ ಎಂಬ ಜೋಡಿಯ ಗಾಡಾ ಪ್ರಥಮ ಸ್ಥಾನ ಪಡೆಯುವ ಮೂಲಕ ಒಂದು ಲಕ್ಷ ಬಹುಮಾನ, ಬೆಳಗಿನಕೊಪ್ಪದ ಈಶ್ವರ ಲಿಂಗೇಶ್ವರ ಪ್ರಸನ್ನ ದ್ವಿತೀಯ ಸ್ಥಾನ (75 ಸಾವಿರ ಬಹುಮಾನ) ಪಡೆದರೆ, ಬೆಳಗುಂದಿಯ ಜ್ಯೋತಿರ್ಲಿಂಗ ಪ್ರಸನ್ನ ತೃತೀಯ (ಐವತ್ತು ಸಾವಿರ) ಪಡೆದವು.

ಕರಡಿಗುಡ್ಡದ ಸಿದ್ದೇಶ್ವರ ಪ್ರಸನ್ನ ಚತುರ್ಥ (ಮೂವತ್ತು ಸಾವಿರ), ಬೆಳಗಾವಿಯ ಜ್ಯೋತಿರ್ಲಿಂಗ ಪ್ರಸನ್ನ ಐದನೆಯ ಬಹುಮಾನ (ಇಪ್ಪತ್ತು ಸಾವಿರ), ಆರನೇ ಸ್ಥಾನವನ್ನು ಅಲಕವಾಡದ ಆಂಜನೇಯ ಪ್ರಸನ್ನ (ಹದಿನೈದು ಸಾವಿರ) ಹಾಗೂ ತಿರ್ಲಾಪುರ ಗ್ರಾಮದ ಇದೇ ಹೆಸರಿನ ಮತ್ತೊಂದು ಜೋಡಿ ಏಳನೆಯ ಸ್ಥಾನ (ಹನ್ನೆರಡು ಸಾವಿರದ ಐದು ನೂರು ರೂ) ಪಡೆದರೆ, 8ನೆಯ ಸ್ಥಾನವನ್ನು ಕಡದಳ್ಳಿಯ ಕಲ್ವೇಶ್ವರ ಪ್ರಸನ್ನ (ಹತ್ತು ಸಾವಿರ ರೂ), ಚಿಕ್ಕಮಲ್ಲಿಗವಾಡದ ಲಕ್ಷ್ಮೀಶ್ವರ ಪ್ರಸನ್ನ 9ನೇ ಸ್ಥಾನ (ಐದು ಸಾವಿರ ರೂ), ಹಲಗಲಿಯ ನಾಗಲಿಂಗೇಶ್ವರ ಪ್ರಸನ್ನ (ನಾಲ್ಕು ಸಾವಿರ ಐದುನೂರು ರೂ) ಬಹುಮಾನ ಪಡೆದವು.

ಇನ್ನು ಜೋಡಳ್ಳಿ ಗೋರಬಾಳದ ಗ್ರಾಮದೇವತಾ ಪ್ರಸನ್ನ ಎಂಬ ಜೋಡಿ ವಿಶೇಷ ಬಹುಮಾನ (ಆರು ಸಾವಿರಐದು ನೂರು) ಪಡೆಯಿತು.

ಈ ಸ್ಪರ್ಧೆಗೆ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ರೈತರು ಆಗಮಿಸಿದ 32 ಜೋಡಿಗಳು ಭಾಗವಹಿಸಿದ್ದವು. ದೂರ ದೂರದ ಊರುಗಳಿಂದ ಆಗಮಿಸಿದ ರೈತರು ತಮ್ಮ ನೆಚ್ಚಿನ ಹೋರಿಗಳನ್ನ ಗಾಡಿಗೆ ಕಟ್ಟಿ ಓಡಿಸಿದರು.ಕೆಲ ಹೋರಿಗಳು ಧೂಳೆಬ್ಬಿಸಿದರೆ, ಇನ್ನೂ ಕೆಲ ಎತ್ತುಗಳು ಮಿಂಚಿನಂತೆ ಓಡಿ ನೋಡುಗರ ಮೈಜುಮ್ಮೆನಿಸಿದವು.