ಖಾಲಿಯಿರುವ ಕಾರ್ಯಕರ್ತೆ ಹುದ್ದೆ ಭರ್ತಿಮಾಡಿ

ದೇವದುರ್ಗ.ಅ.೩೦- ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆ ಭರ್ತಿ ಮಾಡುವಂತೆ ಆಗ್ರಹಿಸಿ ಇಲ್ಲಿನ ಸಿಡಿಪಿಒ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಗಂಗಮ್ಮಗೆ ಶೃತಿ ಸಾಂಸ್ಕೃತಿಕ ವೇದಿಕೆ ಗುರುವಾರ ಮನವಿ ಸಲ್ಲಿಸಿತು.
ತಾಲೂಕಿನ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕೊರತೆಯಿದೆ. ಇದರಿಂದ ಮಕ್ಕಳ ಕಲಿಕೆಗೆ ಹೊಡೆತ ಬಿದ್ದಿದೆ. ಜರದಬಂಡಿ, ಗೆಜ್ಜೆಬಾವಿ, ಶಿವಂಗಿ, ಹಾಳ ಜಾಡಲದಿನ್ನಿ ಕೇಂದ್ರದಲ್ಲಿ ಹುದ್ದೆ ಕೊರತೆಯಿದೆ. ಇದರಿಂದ ೩ರಿಂದ ೬ವರ್ಷದ ಮಕ್ಕಳ ಶಾಲಾಪೂರ್ವ ಶಿಕ್ಷಣಕ್ಕೆ ಹೊಡೆತ ಬೀಳುತ್ತಿದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ತೊಂದರೆಯಾಗಿದೆ ಎಂದು ದೂರಿದರು.
ಕೂಡಲೇ ಜರದಬಂಡಿ, ಗೆಜ್ಜೆಬಾವಿ ಕೇಂದ್ರಕ್ಕೆ ಸಹಾಯಕಿಯರನ್ನು ನೇಮಕ ಮಾಡಿಕೊಳ್ಳಬೇಕು. ಶಿವಂಗಿ-೨, ಹಾಳ ಜಾಡಲದಿನ್ನಿ ಕೇಂದ್ರಕ್ಕೆ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಬೇಕು. ಶಾಖಾಪುರ, ಮುಷ್ಟೂರು, ಜೇರಬಂಡಿ, ಹಂಪಯ್ಯದೊಡ್ಡಿಗೆ ಹೆಚ್ಚುವರಿ ಕೇಂದ್ರ ಮಂಜೂರು ಮಾಡಬೇಕು. ಬಾಡಿಗೆ ಕಟ್ಟಡಗಳಿಗೆ ಹೊಸ ಬಿಲ್ಡಿಂಗ್ ನಿರ್ಮಿಸಬೇಕು. ನಿವೃತ್ತಿ ಹೊಂದಿದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹಿಡಿಗಂಟು ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಂಯೋಜಕರಾದ ರಾಮಣ್ಣ ಎನ್.ಗಣೇಕಲ್, ಈರಲತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯರಾದ ಲಕ್ಷ್ಮಿ ರಾಥೋಡ್, ಕಮಲಾಕ್ಷಿ ಇತರರಿದ್ದರು.
೩೦ಡಿವಿಡಿ೨