
ಖಾರ್ಟೂಮ್ (ಸುಡಾನ್), ಮೇ ೧- ಸುಡಾನ್‌ನಲ್ಲಿ ಆಂತರಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ನಾಗರಿಕರು ಪಲಾಯನ ಮಾಡಲು ಅನುವು ಮಾಡಿಕೊಡುವ ಉದ್ದೇಶದಿಂದ ಕದನ ವಿರಾಮದ ಹೊರತಾಗಿಯೂ ಸುಡಾನ್ ರಾಜಧಾನಿ ಖಾರ್ಟೂಮ್ ಮೇಲೆ ವಾಯುದಾಳಿ ನಡೆಸಲಾಗಿದ್ದು, ನಾಗರಿಕರು ಮತ್ತಷ್ಟು ಭೀತಿಗೊಳಗಾಗಿದ್ದಾರೆ.
ಭಾನುವಾರ ಕದನ ವಿರಾಮದ ವಿಸ್ತರಣೆಯನ್ನು ಘೋಷಿಸುವ ಮುನ್ನ ನಗರ ಕೇಂದ್ರದ ಉತ್ತರಕ್ಕೆ ಆರ್‌ಎಸ್‌ಎಫ್ ಪಡೆಗಳ ವಿರುದ್ಧದ ಕಾರ್ಯಾಚರಣೆ ನಡೆಸಿರುವುದಾಗಿ ಸೇನೆ ತಿಳಿಸಿದೆ. ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇನೆ, ಅರೆಸೈನಿಕ ಪಡೆ ರಾಪಿಡ್ ಸಪೋರ್ಟ್ ಫೋರ್ಸ್ (ಆರ್‌ಎಸ್‌ಎಫ್) ಹೊರಹಾಕುವ ಸಲುವಾಗಿಯೇ ಖಾರ್ತೂಮ್ ಮೇಲೆ ವಾಯುದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಆದರೆ ನಾಗರಿಕರಿಗೆ ಪಲಾಯನ ಮಾಡುವ ಸಲುವಾಗಿ ಸದ್ಯ ಕದನ ವಿರಾಮ ಘೋಷಣೆಯಾಗಿದ್ದರೂ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ೫೦೦ ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದ್ದು, ಆದರೆ ನೈಜಮಟ್ಟದಲ್ಲಿ ಸಾವು-ನೋವಿನ ಪ್ರಮಾಣ ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಲಾಗಿದೆ. ಅದೂ ಅಲ್ಲದೆ ಲಕ್ಷಾಂತರ ಜನರು ಖಾರ್ಟೂಮ್‌ನಲ್ಲಿ ಸದ್ಯ ಸಿಲುಕಿಕೊಂಡಿದ್ದಾರೆ. ಆದರೆ ಯುಎಸ್ ಮತ್ತು ಸೌದಿ ಮಧ್ಯಸ್ಥಿಕೆಯೊಂದಿಗೆ ಒಪ್ಪಂದದ ಮುಂದಿನ ಹಂತದಲ್ಲಿ ಸೇನೆ ಏನು ಮಾಡಲಿದೆ ಎಂದು ಸದ್ಯ ಅಸ್ಪಷ್ಟವಾಗಿದೆ. ಈ ನಡುವೆ ಆಸ್ಪತ್ರೆಗಳಿಗೆ ಆರೋಗ್ಯ ಕಿಟ್‌ಗಳು ಸೇರಿದಂತೆ ಎಂಟು ಟನ್ ಪರಿಹಾರ ಸಾಮಗ್ರಿಗಳೊಂದಿಗೆ ಬಂದ ವಿಮಾನವು ಪೋರ್ಟ್ ಸುಡಾನ್‌ಗೆ ಬಂದಿಳಿದಿದೆ ಎಂದು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ತಿಳಿಸಿದೆ. ದ್ವೇಷದ ವಾತಾವರಣ ಇನ್ನೂ ನಡೆಯುತ್ತಿರುವುದರಿಂದ, ಖಾರ್ಟೂಮ್‌ನಂಥ ಸಕ್ರಿಯ ಹೋರಾಟದ ಸ್ಥಳಗಳಲ್ಲಿನ ವೈದ್ಯಕೀಯ ಸೌಲಭ್ಯಗಳಿಗೆ ಈ ವಸ್ತುಗಳನ್ನು ತಲುಪಿಸಲು ಐಸಿಆರ್‌ಸಿ ತಂಡಗಳಿಗೆ ಸಂಘರ್ಷಕ್ಕೆ ಪಕ್ಷಗಳಿಂದ ಸುರಕ್ಷಿತ ಮಾರ್ಗದ ಖಾತರಿಗಳು ಬೇಕಾಗುತ್ತವೆ ಎಂದು ರೆಡ್‌ಕ್ರಾಸ್ ಪ್ರಕಟನೆಯಲ್ಲಿ ತಿಳಿಸಿದೆ. ಏಪ್ರಿಲ್ ೧೫ ರಂದು ಭುಗಿಲೆದ್ದ ಹೋರಾಟದ ಪರಿಣಾಮವಾಗಿ ರಾಜಧಾನಿಯ ೭೦% ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳನ್ನು ಈಗಾಗಲೇ ಮುಚ್ಚಲಾಗಿದೆ. ಸೇನಾ ಕಮಾಂಡರ್ ಜನರಲ್ ಅಬ್ದೆಲ್ ಫತಾಹ್ ಅಲ್-ಬುರ್ಹಾನ್ ಮತ್ತು ಆರ್‌ಎಸ್‌ಎಫ್ ಮುಖ್ಯಸ್ಥ ಜನರಲ್ ಮುಹಮ್ಮದ್ ಹಮ್ದಾನ್ ದಗಾಲೊ ನಡುವಿನ ಕಲಹದಿಂದಾಗಿ, ಅದರಲ್ಲೂ ಆರ್‌ಎಸ್‌ಎಫ್ ಅನ್ನು ಸೈನ್ಯಕ್ಕೆ ಸೇರಿಸುವ ಯೋಜನೆ ಬಗೆಗಿನ ಗೊಂದಲದಿಂದಾಗಿ ಪರಿಸ್ಥಿತಿ ಮಿತಿಮೀರಿದೆ.