ಖಾಯಂಗೊಳಿಸಿ ಇಲ್ಲವಾದರೆ ಕನಿಷ್ಠ ವೇತನ ನೀಡಿ – ಸರ್ಕಾರಕ್ಕೆ ಪರವಾನಿಗೆ ಭೂಮಾಪಕರ ಒತ್ತಾಯ, 18ರಿಂದ ಪ್ರತಿಭಟನೆ

ಕೂಡ್ಲಿಗಿ.ಮಾ.15 :- ಸಂಭಾವನೆ ಇಲ್ಲದ ನೌಕರರಾಗಿರುವ ಪರವಾನಿಗೆ ಭೂಮಾಪಕರನ್ನು ಸರ್ಕಾರವು ನಿರ್ಲಕ್ಷ್ಯವಹಿಸದೆ ಸೇವಾ ಭದ್ರತೆ ಒದಗಿಸಿ ಅವರನ್ನು ಖಾಯಂಗೊಳಿಸಿ ಇಲ್ಲವಾದಲ್ಲಿ ಅವರಿಗೆ ಕನಿಷ್ಠ ವೇತನ ನೀಡಬೇಕೆಂದು ಇದೇ ತಿಂಗಳ 18ರಿಂದ ಬೆಂಗಳೂರು ಫ್ರಿಡಂ ಪಾರ್ಕ್ನಲ್ಲಿ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಸುವುದಾಗಿ ರಾಷ್ಟ್ರಿಯ ಕಾರ್ಮಿಕ ಹಕ್ಕುಗಳ ಸಮಿತಿಯ ಅಧ್ಯಕ್ಷ ಪಾವಗಡ ಶ್ರೀರಾಮ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ರಾಜ್ಯದಲ್ಲಿ ಪರವಾನಿಗೆ ಭೂಮಾಪಕರನ್ನು ಕೇವಲ ಜೀತದಂತೆ ಬಳಸಿಕೊಳ್ಳುತ್ತಿದ್ದು ಅವರ ಮಾಡಿದ ಕೆಲಸಕ್ಕೂ ನೀಡುವ ಹಣ ಸಹ ಸರಿಯಾಗಿ ನೀಡದೆ ಅವರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವ ಆಗಿದೆ ಸರ್ಕಾರಿ ಭೂಮಾಪಕರಿಗೆ ನೇಮಕಾತಿ ನಿರ್ಧಿಷ್ಟ ಪಡಿಸಿರುವ ವಿದ್ಯಾರ್ಹತೆಯಂತೆ ಪರವಾನಿಗೆ ಭೂಮಾಪಕರನ್ನು ನೇಮಕಾತಿ ಮಾಡಿಕೊಂಡು ಸುಮಾರು 15 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ ವಯೋಮಿತಿ ಕಳಕೊಂಡರು ಅವರ ಖಾಯಂಮಾಡಿಕೊಳ್ಳಲು ಸರ್ಕಾರ ಯಾವುದೋ ಕುಂಟುನೆಪ ಹೇಳುವುದು ಸರಿಯಾದ ಕ್ರಮವಲ್ಲ, ಒಂದು ಸರ್ವೇ ಪ್ರಕರಣಕ್ಕೆ 800ರೂ. ಮಾತ್ರ ನಿಗಧಿ ಮಾಡಿದ್ದು ಕಳೆದ ವರ್ಷ ಕೋವಿಡ್ ಲಾಕ್ ಡೌನ್ ಆದ ಸಂದರ್ಭದಲ್ಲಿ ಅವರ ಜೀವನ ನರಕಕ್ಕಿಂತಲೂ ಕಡೆಯಾಗಿದ್ದು ಇವರ ಖಾಯಂಗೊಳಿಸಲು ಯಾವುದೇ ಕುಂಟುನೆಪ ಹೇಳದೆ ಸರ್ಕಾರ ಪರವಾನಿಗೆ ಭೂಮಾಪಕರನ್ನು ಖಾಯಂಗೊಳಿಸಬೇಕೆಂದು ಪಾವಗಡ ಶ್ರೀರಾಮ ಒತ್ತಾಯಿಸಿದರು.
ನೂತನ ವಿಜಯನಗರ ಜಿಲ್ಲೆಯ ಪರವಾನಿಗೆ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ ಸುಮಾರು 19 ವರ್ಷಗಳಿಂದ ಪರವಾನಿಗೆ ಭೂಮಾಪಕರಾಗಿ ಸೇವೆ ಮಾಡುತ್ತಿದ್ದು ನಮ್ಮಗಳ ಸೇವೆ ಇದೇ ಭೂಮಾಪಕರ ಸೇವೆಯಲ್ಲಿ ವಯೋಮಿತಿಯಾಗುತ್ತಿದ್ದು ಬೇರೆ ನೌಕರಿಗೆ ಹೋಗಲು ಆಗದೆ ಇತ್ತ ಈ ಸೇವೆ ಬಿಡಲು ಆಗದ ಪರಿಸ್ಥಿತಿಯಲ್ಲಿದ್ದು ನಮಗೆ ಒಂದು ಸರ್ವೇ ಪ್ರಕರಣದಿಂದ 800ರೂ ಸೀಮಿತ ಹಣ ಸರಿಯಾಗಿ ತಲುಪದೇ ಇದ್ದು ಸಂಭಾವನೆ ಇಲ್ಲದ ನೌಕರರಾಗಿದ್ದೇವೆ ಸರ್ಕಾರವು ನಮಗೆ ಖಾಯಂಗೊಳಿಸಬೇಕು ಇಲ್ಲವಾದರೆ ಕನಿಷ್ಠವೇತನವನ್ನಾದರೂ ನೀಡಿ ಇಲ್ಲವಾದಲ್ಲಿ ನಮಗೆ ದಯಾಮರಣ ನೀಡಿ ಎಂದು ದುಃಖಭರಿತರಾಗಿ ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರವು ಸ್ಮಶಾನ, ಮುಜರಾಯಿ ದೇವಸ್ಥಾನ, ಖಬರ್ ಸ್ಥಾನದ ಅಳತೆ, ದರಖಾಸ್ತು ಪೋಡಿ ಅಳತೆ ಮತ್ತು ಸಂಡೂರು ಇನಾಮ್ ಸೆಟ್ಲಾಮೆಂಟ್ ಮುಕ್ತ ಕೆರೆಗಳ ಅಳತೆ, ನೀರಾವರಿ ಇಲಾಖೆ ಮತ್ತು ವಕ್ಫ್ ಬೋರ್ಡ್ ಅಳತೆ ಹಾಗೂ ಚುನಾವಣೆಯಂತಹ ಸರ್ಕಾರಿ ಜವಾಬ್ದಾರಿಯುತ ಕೆಲಸಗಳಿಗೆ ಬಳಸಿಕೊಂಡು ಅದಕ್ಕೆ ನೀಡುವ ಸಂಭಾವನೆ ಸಹ ನೀಡದೆ ನಮಗೆ ಘೋರ ಅನ್ಯಾಯ ಮಾಡುತ್ತಿದೆ. ತತ್ಕಾಲ್ ಪೋಡಿ ಯೋಜನೆಯಲ್ಲಿ ಕೆಲಸ ಮಾಡಿಸಿಕೊಂಡು 2013ರಿಂದ 2021ರವರೆಗೆ ಪರವಾನಿಗೆ ಭೂಮಾಪಕರಿಗೆ ಸಂಭಾವನೆ ಕೊಟ್ಟಿಲ್ಲ ಸುಮಾರು 36ಕೋಟಿ ರೂ. ಹಣ ಭೂಮಾಪಕರಿಗೆ ಕೊಡುವ ಹಣ ಆಯುಕ್ತರ ಪಿ.ಡಿ. ಖಾತೆಯಲ್ಲಿದೆ ಇದನ್ನು ಏಕೆ ಕೆಲಸ ಮಾಡಿರುವ ಪರವಾನಿಗೆ ಭೂಮಾಪಕರಿಗೆ ಕೊಡದೆ ಇರಲು ಕಾರಣವೇನು ಎಂದು ಪ್ರಶ್ನಿಸಿದರು ಮತ್ತು ಪರವಾನಿಗೆ ಭೂಮಾಪಕರ ನೇಮಕಾತಿ ಕುರಿತಂತೆ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರುವಂತೆ ಪ್ರಸ್ತಾವನೆ ಇದ್ದು ಒಂದು ಬಾರಿ ವಿಶೇಷ ನೇಮಕಾತಿ ಮಾಡಿಕೊಳ್ಳಲು ನಿಯಮಾವಳಿ ರೂಪಿಸಿದ್ದರು ಆಯುಕ್ತರು ಸರ್ಕಾರಕ್ಕೆ ಯಾವುದೇ ಮಾಹಿತಿ ಕೊಡದೆ ಇದಕ್ಕೆ ಪೂರಕವಾಗಿ ಪರವಾನಿಗೆ ಭೂಮಾಪಕರ ನೇಮಕಾತಿ ಮಾಡಿಕೊಳ್ಳಲು ಉಮಾದೇವಿ ಪ್ರಕರಣ ಅಡ್ಡ ಬರುತ್ತದೆ ಎಂದು ಹೇಳುತ್ತಿದ್ದಾರೆ ಆದರೆ ಅಡ್ವೋಕೇಟ್ ಜನರಲ್ ರವರು ಉಮಾದೇವಿ ಪ್ರಕರಣಕ್ಕೂ ಮತ್ತು ಪರವಾನಿಗೆ ಭೂಮಾಪಕರ ನೇಮಕಾತಿಗೂ ಯಾವುದೇ ಸಂಬಂಧ ಇಲ್ಲವೆಂದು ಸ್ಪಷ್ಟಪಡಿಸುತ್ತಿದ್ದಾರೆ ಇದೆಲ್ಲದರ ಕುರಿತಂತೆ ರಾಜ್ಯದ ಎಲ್ಲಾ ತಾಲೂಕಿನ 2300 ಜನ ಪರವಾನಿಗೆ ಭೂಮಾಪಕರು ಕಳೆದ ತಿಂಗಳ 9ನೇ ತಾರೀಖಿನಿಂದ ಭೂಮಾಪಕರ ಕೆಲಸ ಸ್ಥಗಿತಗೊಳಿಸಿ ನಮ್ಮ ಹಕ್ಕೊತ್ತಾಯವನ್ನು ಸರ್ಕಾರಕ್ಕೆ ಸಲ್ಲಿಸಿ ಬರುವ 18ರಿಂದ ಬೆಂಗಳೂರಿನ ಫ್ರಿಡಂ ಪಾರ್ಕಲ್ಲಿ ಬೇಡಿಕೆ ಈಡೇರುವ ತನಕ ನಿರಂತರ ಹೋರಾಟಕ್ಕೆ ಮುಂದಾಗಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಶಿವಣ್ಣ, ಜಿಲ್ಲಾ ಉಪಾಧ್ಯಕ್ಷ ಕಂಬಿಗಿರೀಶ, ರತ್ನನಾಯ್ಕ್, ಗೌರವಾಧ್ಯಕ್ಷ ತಿಪ್ಪಾನಾಯ್ಕ್, ಪ್ರಧಾನ ಕಾರ್ಯದರ್ಶಿ ಟಿಕ್ಯಾನಾಯ್ಕ್, ಖಜಾಂಚಿ ಹೇಮಣ್ಣ, ಸಂಘಟನಾ ಕಾರ್ಯದರ್ಶಿ ಕೊಟ್ರೇಶ, ವಿಕ್ರಂ ಮತ್ತು ಹೊಸಪೇಟೆ ತಾಲೂಕು ಅಧ್ಯಕ್ಷ ಬೇವಿನಕಟ್ಟೆ ಸಿದ್ದಪ್ಪ, ಕೂಡ್ಲಿಗಿ ತಾಲೂಕು ಅಧ್ಯಕ್ಷ ಹೆಚ್. ನಾಗರಾಜ, ಕೊಟ್ಟೂರು ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಬಸವರಾಜನಾಯ್ಕ್ , ಹಡಗಲಿ ತಾಲೂಕಿನ ಅಧ್ಯಕ್ಷ ಚಂದ್ರಶೇಖರ, ಹರಪನಹಳ್ಳಿ ತಾಲೂಕಿನ ಅಧ್ಯಕ್ಷ ರಾಜಪ್ಪ ಸೇರಿದಂತೆ ಇತರೆ ಪಧಾದಿಕಾರಿಗಳು ಉಪಸ್ಥಿತರಿದ್ದರು.


ವಲಸೆ ಕಾರ್ಮಿಕರಿಗೆ ಮನೆ ಮಂಜೂರು ಮಾಡಲು ಸರ್ಕಾರಕ್ಕೆ ಪಾವಗಡ ಶ್ರೀರಾಮ ಒತ್ತಾಯ : ಕೋವಿಡ್ ಸಂದರ್ಭದಲ್ಲಿ ಕಂಡುಬಂದ ಮಾಹಿತಿಯಂತೆ ದೇಶದಲ್ಲಿ ಸುಮಾರು 20ಕೋಟಿ ವಲಸೆ ಕಾರ್ಮಿಕರಿದ್ದು ಅದರಂತೆ ರಾಜ್ಯದಲ್ಲಿ 48ಲಕ್ಷ ವಲಸೆ ಕಾರ್ಮಿಕರು ಗ್ರಾಮಗಳನ್ನು ಬಿಟ್ಟು ನಗರಪ್ರದೇಶದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಅವರಿಗೆ ಜೀವಿಸಲು ಮನೆಗಳಿಲ್ಲದೆ ತಗಡು, ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದು ಪ್ರಧಾನಿಯವರು ಹೇಳಿದಂತೆ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಡುವ ಆಶಯದಲ್ಲಿ ವಲಸೆ ಕಾರ್ಮಿಕರಿಗೆ ಸರ್ಕಾರಿ ಜಾಗ ಗುರುತಿಸಿ ನಗರ ಪ್ರದೇಶದಲ್ಲಿ ಕೂಲಿಹರಸಿ ಬಂದ ಕಾರ್ಮಿಕರಿಗೆ ಅಲ್ಲಿಯಾದರೂ ಮನೆ ನೀಡಲಿ ಇಲ್ಲವಾದಲ್ಲಿ ಅವರ ಗ್ರಾಮದಲ್ಲಾದರೂ ಮನೆ ನಿರ್ಮಿಸಿಕೊಡುವಂತೆ ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಪಾವಗಡ ಶ್ರೀರಾಮ ಸರ್ಕಾರವನ್ನು ಒತ್ತಾಯಿಸಿದರು.