ಖಾನುನ್ ಅಬ್ಬರಕ್ಕೆ ಜಪಾನ್ ತತ್ತರ

ತೈವಾನ್, ಆ.೩- ಖಾನುನ್ ಚಂಡಮಾರುತದ ಭೂಮಿಗೆ ಅಪ್ಪಳಿಸಿ, ಭಾರೀ ಪ್ರಮಾಣದ ಪ್ರವಾಹದ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಇದೀಗ ರಾಜಧಾನಿ ತೈಪೆ ಸೇರಿದಂತೆ ತೈವಾನ್‌ನ ಉತ್ತರ ಭಾಗಗಳಲ್ಲಿ ಮಾರುಕಟ್ಟೆಗಳು ಮತ್ತು ಶಾಲೆಗಳನ್ನು ಗುರುವಾರ ಮುಚ್ಚಲು ಆದೇಶಿಸಲಾಗಿದೆ. ಈಗಾಗಲೇ ಖಾನುನ್ ಚಂಡಮಾರುತದಿಂದಾಗಿ ಜಪಾನ್‌ನಲ್ಲಿ ೨ ಲಕ್ಷಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಖಾನುನ್ ಚಂಡಮಾರುತವನ್ನು ತೈವಾನ್‌ನ ಹವಾಮಾನ ಬ್ಯೂರೋ ಎರಡನೇ ಪ್ರಬಲ ಚಂಡಮಾರುತದ ಮಟ್ಟ ಎಂದು ವರ್ಗೀಕರಿಸಲಾಗಿದೆ. ಸದ್ಯ ಗಂಟೆಗೆ ೨೦೯ ಕಿಮೀ ಗರಿಷ್ಠ ಗಾಳಿಯೊಂದಿಗೆ ಚಂಡಮಾರುತವು ನಿಧಾನವಾಗಿ ಈಶಾನ್ಯ ಕರಾವಳಿಯತ್ತ ಸಾಗಿದೆ. ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ನ್ಯೂ ತೈಪೆ, ಕೀಲುಂಗ್, ಯಿಲಾನ್ ಮತ್ತು ರಾಜಧಾನಿ ತೈಪೆ ಸೇರಿದಂತೆ ಉತ್ತರ ನಗರಗಳಲ್ಲಿ ಗುರುವಾರ ವ್ಯಾಪಾರ ಮತ್ತು ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಅಲ್ಲದೆ ತೈವಾನ್‌ನ ಷೇರು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳು ಸಹ ಮುಚ್ಚಲಾಗಿದೆ. ಪರ್ವತಗಳಿಂದ ಕೂಡಿದ ಮಧ್ಯ ತೈವಾನ್‌ನಲ್ಲಿ ಬರೊಬ್ಬರಿ ೦.೬ ಮೀ. ವರೆಗಿನ ಒಟ್ಟು ಮಳೆಯನ್ನು ಮುನ್ಸೂಚಿಸಲಾಗಿದೆ. ಅಲ್ಲದೆ ತೈಪೆ ಸಮೀಪದ ಪರ್ವತಗಳಲ್ಲಿ ೦.೩ ಮೀಟರ್ ಮಳೆಯನ್ನು ನಿರೀಕ್ಷಿಸಲಾಗಿದೆ. ಖಾನುನ್ ಸಮುದ್ರದಾದ್ಯಂತ ಪಶ್ಚಿಮ ದಿಕ್ಕಿನಲ್ಲಿ ೪ ಕಿಮೀ ಗ್ರಾಂ ವೇಗದಲ್ಲಿ ಚಲಿಸುತ್ತಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಶುಕ್ರವಾರ ತಡವಾಗಿ ಈಶಾನ್ಯಕ್ಕೆ ತೀಕ್ಷ್ಣವಾದ ತಿರುವು ನೀಡುವ ಮೊದಲು ತೈವಾನ್‌ನ ಉತ್ತರ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಪರಿಣಾಮ ಸದ್ಯ ಸುಮಾರು ೩೦ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಎಲ್ಲಾ ದೇಶೀಯ ದೋಣಿ ಮಾರ್ಗಗಳನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರವು ತುರ್ತು ಪ್ರತಿಕ್ರಿಯೆ ಕೇಂದ್ರವನ್ನು ಸ್ಥಾಪಿಸಿದ್ದು, ಉತ್ತರದ ನಗರಗಳಲ್ಲಿ ನೂರಾರು ಸೈನಿಕರು ಸನ್ನದ್ಧ ಸ್ಥಿತಿಯಲ್ಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಈಗಾಗಲೇ ಜಪಾನ್‌ನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಒಕಿನೊವಾಗೆ ಚಂಡಮಾರುತ ಅಪ್ಪಳಿಸಿದ ಪರಿಣಾಮ ಭಾರೀ ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, ಪರಿಣಾಮ ೨ ಲಕ್ಷಕ್ಕೂ ಹೆಚ್ಚಿನ ಮನೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.