ಖಾದಿ ಉದ್ಯಮಕ್ಕೆ ಪುನಶ್ಚೇತನ ನೀರಲಕೇರಿ ಆಗ್ರಹ


ಧಾರವಾಡ,ನ.8- ಖಾದಿ ಉದ್ಯಮ ಹಾಗೂ ಅದರಲ್ಲಿ ಕೆಲಸ ಮಾಡುವ ನೇಕಾರರು ಮಾತ್ರ ದಯನೀಯ ಸ್ಥಿತಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಉದ್ಯಮಕ್ಕೆ ಪುನಶ್ಚೇತನ ಒದಗಿಸಬೇಕೆಂದು ಕೆಪಿಸಿಸಿ ಜಿಲ್ಲಾ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಒತ್ತಾಯ ಮಾಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ 6 ಸೇರಿ ರಾಜ್ಯದಲ್ಲಿ 160 ಖಾದಿ ಉತ್ಪಾದನಾ ಕೇಂದ್ರಗಳಿದ್ದು, ಈ ಕೇಂದ್ರಗಳಿಗೆ ಕಳೆದ ಐದು ವರ್ಷಗಳಿಂದ ನೀಡಬೇಕಾದ ರೂ.115 ಕೋಟಿ ಅನುದಾನ ಹಾಗೂ ರಿಯಾಯ್ತಿ ಹಣ ನೀಡದ ಕಾರಣ ಈ ಕೇಂದ್ರಗಳು ಅವಸಾನದ ಅಂಚಿನಲ್ಲಿವೆ ಎಂದು ತಿಳಿಸಿದರು.
ಬೆಂಗೇರಿ ಖಾದಿ ಫೆಡರೇಶನ್, ಜಿಲ್ಲಾ ಖಾದಿ ಗ್ರಾಮೋದ್ಯೋಗ ಸಂಘ, ಧಾರವಾಡ ತಾಲೂಕು ಸೇವಾ ಸಂಘ, ಉಪ್ಪಿನ ಬೆಟಗೇರಿ, ಖಾದಿ ನೇಕಾರ ಸಹಕಾರಿ ಉತ್ಪಾದಕ ಸಂಘ, ಹೆಬ್ಬಳ್ಳಿಯ ಕ್ಷತ್ರೀಯ ಸಂಘ, ಗರಗ ಕ್ಷೇತ್ರೀಯ ಸೇವಾ ಸಂಘಗಳ ಮೂಲಕ ಖಾದಿ ಉತ್ಪಾದನೆ ಆಗುತ್ತಿದ್ದು, ಮಾರಾಟವಿಲ್ಲದೇ ಉತ್ಪಾದಕರು ಸಂಕಷ್ಟದಲ್ಲಿದ್ದಾರೆ ಎಂದರು.
ಈ ಕೇಂದ್ರಗಳಿಗೆ ಸರ್ಕಾರದಿಂದ ರೂ.7 ಕೋಟಿ ಅನುದಾನ ಬರಬೇಕಿದೆ. ಗರಗ ಮತ್ತು ಉಪ್ಪಿನ ಬೆಟಗೇರಿ ಖಾದಿ ಕೇಂದ್ರಗಳಲ್ಲಿನ ಚರಕ ಹಾಗೂ ಕಟ್ಟಡ ಶಿಥಿಲಗೊಂಡಿದೆ. ಈ ಕೇಂದ್ರಗಳಿಗೆ ಮರು ಜೀವ ನೀಡಲು ಕಾಂಗ್ರೆಸ್ ಪಕ್ಷವು ‘ಧ್ವಜದ ಬೆವರಿಗೊಂದು ಕಾಂಗ್ರೆಸ್ ನಮನ’ ಎಂಬ ಅಭಿಯಾನ ಆಯೋಜಿಸಿದೆ ಎಂದು ಹೇಳಿದರು.
ಸರ್ಕಾರಗಳು ಖಾದಿ ಕೇಂದ್ರಗಳಿಗೆ ಪೆÇ್ರೀತ್ಸಾಹ ನೀಡದೇ ಹೋದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನಿಸದಂತೆ. ಸರ್ಕಾರಿ ನೌಕರಸ್ಥರು, ಕಾಲೇಜು ವಿದ್ಯಾರ್ಥಿಗಳ ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ತೊಡುವ ಆದೇಶ ಮಾಡುವ ಮೂಲಕ ಖಾದಿ ಉತ್ಪಾದನಾ ಕ್ಷೇತ್ರಕ್ಕೆ ಪುನರುಜ್ಜೀವನ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಸರ್ಕಾರ ತಿಂಗಳೊಳಗೆ ಈ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದ್ದರೆ ಕೆಪಿಸಿಸಿಯಿಂದ ಪಾದಯಾತ್ರೆ, ಉಪವಾಸ ಇತ್ಯಾದಿಯಾಗಿ ಶಾಂತಿಯುತ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ಧಾರವಾಡ ತಾಲೂಕು ಸೇವಾ ಸಂಘದ ಎನ್.ಕೆ.ಕಾಗಿನೆಲೆ ಮಾತನಾಡಿ, ರಾಷ್ಟ್ರಧ್ವಜ ನಿರ್ಮಾಣಕ್ಕೆ ಧಾರವಾಡ ಜಿಲ್ಲೆಯ ಖಾದಿ ಕೇಂದ್ರಗಳ ಕೊಡುಗೆ ಸಾಕಷ್ಟಿದೆ. ಆದರೆ, ಕೇಂದ್ರಗಳ ಬಗ್ಗೆ ಸರ್ಕಾರಗಳ ನಿರ್ಲಕ್ಷ್ಯ ವಹಿಸಿದ್ದು ಬೇಸರ. ನಶಿಸುವ ಮುನ್ನವೇ ಕೇಂದ್ರಗಳು ಜೀವಂತ ಇದ್ದಾಗ ಅನುದಾನ ಬಿಡುಗಡೆಗೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕೊಪ್ಪಳ ಜಿಲ್ಲಾ ಮಾಧ್ಯಮ ವಿಶ್ಲೇಷಕಿ ಶೈಲಜಾ ಹಿರೇಮಠ, ಕೆಪಿಸಿಸಿ ಮಂಜುನಾಥ ಭೋವಿ, ಬಂಗಾರೇಶ ಹಿರೇಮಠ ಮತ್ತಿತರರ ಇದ್ದರು.