ಖಾತೆ ಕ್ಯಾತೆ ಸಿಎಂಗೆ ತಲೆನೋವು


ಬೆಂಗಳೂರು, ಜ. ೧೪- ಗಜಪ್ರಸವವಾಗಿದ್ದ ಸಂಪುಟ ವಿಸ್ತರಣೆಗೆ ಮೋಕ್ಷ ಸಿಗುತ್ತಿದ್ದಂತೆಯೇ ನೂತನ ಸಚಿವರಿಗೆ ಖಾತೆಗಳನ್ನು ಹಂಚುವುದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈಗ ತಲೆನೋವಾಗಿ ಪರಿಣಮಿಸಿದೆ.
ಸಂಪುಟ ಸೇರಿರುವ ಹಿರಿಯ ಸಚಿವರುಗಳು ತಮ್ಮ ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ಪ್ರಲ ಹಾಗೂ ಸಂಪನ್ಮೂಲ ಖಾತೆಗಳಿಗೆ ಬೇಡಿಕೆ ಇಟ್ಟಿರುವುದು ಖಾತೆ ಹಂಚಿಕೆಯ ಕಗ್ಗಂಟು ಸೃಷ್ಟಿಸಿದೆ.
ನೂತನ ಸಚಿವರಾದ ಉಮೇಶ್‌ಕತ್ತಿ, ಮುರುಗೇಶ್‌ನಿರಾಣಿ, ಅರವಿಂದಲಿಂಬಾವಳಿ, ಎಂ.ಟಿ.ಬಿ. ನಾಗರಾಜು ಇವರುಗಳು ತಮ್ಮ ರಾಜಕೀಯ ಹಿರಿತನವನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ಖಾತೆ ನೀಡಿ ಎಂದು ಮುಖ್ಯಮಂತ್ರಿಗಳ ಮುಂದೆ ಬೇಡಿಕೆ ಇಟ್ಟಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದರ ಜತೆಗೆ ಸಂಪುಟದಲ್ಲಿರುವ ಹಲವು ಹಿರಿಯ ಸಚಿವರು ಖಾತೆ ಬದಲಾವಣೆ ಬಯಸಿರುವುದು ಖಾತೆ ಹಂಚಿಕೆಯ ಕಗ್ಗಂಟು ಬಿಗಡಾಯಿಸಿದೆ.
ವಿಧಾನಸಭೆಗೆ ೮ ಬಾರಿ ಆಯ್ಕೆಯಾಗಿರುವ ಉಮೇಶ್‌ಕತ್ತಿ ಅವರು ಮೂರನೇ ಬಾರಿ ಸಚಿವರಾಗಿದ್ದು, ಇಂಧನ ಅಥವಾ ಲೋಕೋಪಯೋಗಿ ಖಾತೆ ನೀಡುವಂತೆ ಕೋರಿದ್ದಾರೆ. ಹಾಗೆಯೇ ಅರವಿಂದಲಿಂಬಾವಳಿ ಅವರು ಸಹ ಒಳ್ಳೆ ಖಾತೆ ನೀಡುವಂತೆ ಮನವಿ ಮಾಡಿದ್ದು, ಮುರುಗೇಶ್‌ನಿರಾಣಿ ಸಹ ಪ್ರಬಲ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಎಂಟಿಬಿ ನಾಗರಾಜ್ ಸಹ ಉತ್ತಮ ಕೆಲಸ ಮಾಡುವಂತಹ ಖಾತೆ ನೀಡಿ ಎಂದು ಕೋರಿಕೆ ಸಲ್ಲಿಸಿದ್ದಾರೆ.
ಇದರ ಜತೆಗೆ ಗೃಹ ಸಚಿವ ಬಸವರಾಜಬೊಮ್ಮಾಯಿ, ಗ್ರಾಮಿಣಾಭಿವೃದ್ಧಿ ಸಚಿವ ಈಶ್ವರಪ್ಪ, ಕೈಗಾರಿಕಾ ಸಚಿವ ಜಗದೀಶ್‌ಶೆಟ್ಟರ್, ಕಂದಾಯ ಸಚಿವ ಆರ್. ಅಶೋಕ್ ಸಹ ಖಾತೆ ಬದಲಾವಣೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಹಣಕಾಸು, ಇಂಧನ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವಜನ ಮತ್ತು ಕ್ರೀಡೆ, ಬೆಂಗಳೂರು ನಗರಾಭಿವೃದ್ಧಿ, ಅಬಕಾರಿ ಖಾತೆಗಳಿವೆ. ಈ ಪೈಕಿ ಹಣಕಾಸು ಖಾತೆಯನ್ನು ಉಳಿಸಿಕೊಂಡು ಉಳಿದ ಖಾತೆಗಳನ್ನು ನೂತನ ಸಚಿವರಿಗೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ತಯಾರಿ ನಡೆಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗ ಸಿದ್ಧಪಡಿಸಿಕೊಂಡಿರುವ ಪಟ್ಟಿಯ ಪ್ರಕಾರ ಉಮೇಶ್‌ಕತ್ತಿ ಅವರಿಗೆ ಪ್ರವಾಸೋದ್ಯಮ ಖಾತೆ, ಮುರುಗೇಶ್‌ನಿರಾಣಿ ಅವರಿಗೆ ಇಂಧನಖಾತೆ, ಅರವಿಂದಲಿಂಬಾವಳಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ, ಎಂಟಿಬಿ ನಾಗರಾಜು ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಹಾಗೂ ಆರ್. ಶಂಕರ್ ಅವರಿಗೆ ಅಬಕಾರಿ ಇಲಾಖೆಯ ಜವಾಬ್ದಾರಿ, ಎಸ್.ಅಂಗಾರ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಮತ್ತು ಸಿ.,ಪಿ. ಯೋಗೇಶ್ವರ್ ಅವರಿಗೆ ಯುವ ಜನ ಮತ್ತು ಕ್ರೀಡಾ ಖಾತೆ ಹಂಚಿಕೆ ಮಾಡುವ ಸಾಧ್ಯತೆಗಳಿವೆ.
ಇದರ ಜತೆಗೆ ಹಿರಿಯ ಸಚಿವರಾದ ಬಸವರಾಜಬೊಮ್ಮಾಯಿ, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಜಗದೀಶ್‌ಶೆಟ್ಟರ್ ಅವರ ಖಾತೆಗಳು ಅದಲುಬದಲಾಗುವ ಸಾಧ್ಯತೆ ಇದೆ.
ಇಂದು ಸಂಜೆ ವೇಳೆಗೆ ಮುಖ್ಯಮಂತ್ರಿಗಳು ಖಾತೆ ಹಂಚಿಕೆಯನ್ನು ಪೂರ್ಣಗೊಳಿಸಿ ರಾಜ್ಯಪಾಲರಿಗೆ ಪಟ್ಟಿ ಕಳುಹಿಸಲಿದ್ದಾರೆ ಎಂದು ಹೇಳಲಾಗಿದೆ.