ಖಾಕಿ ಮೇಲೆ ಹಲ್ಲೆನೈಜೀರಿಯಾ ಪುಂಡರ ಸೆರೆ


ಬೆಂಗಳೂರು,ಏ.೨೦-ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನೈಜೀರಿಯಾದ ೮ ಮಂದಿ ಪುಂಡರನ್ನು ಬಂಧಿಸಲಾಗಿದೆ.
ಪೊಲೀಸರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಎಂಟು ಮಂದಿ ನೈಜೀರಿಯಾ ಪುಂಡರನ್ನು ರಾಜನಕುಂಟೆ ಬಳಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ಹಲ್ಲೆಯನ್ನು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದ್ದ ಪುಂಡರ ಹೆಡೆಮುರಿ ಕಟ್ಟಲು ಸಿಸಿಬಿ ಪೊಲೀಸರ ಜತೆಗೆ ಡಿಸ್ವಾಟ್ ಪಡೆಯನ್ನು ನಿಯೋಜಿಸಿದ್ದರು.
ತಕ್ಷಣವೇ ಕಾರ್ಯಾಚರಣೆಗಿಳಿದ ಡಿಸ್ವಾಟ್ ಮತ್ತು ಸಿಸಿಬಿ ಪೊಲೀಸರು ಎಂಟು ಮಂದಿಯ ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ:
ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆಫ್ರಿಕಾದ ಪ್ರಜೆಗಳು ಹಲ್ಲೆ ಮಾಡಿದ ಘಟನೆ ನಿನ್ನೆ ದಿನ ತಡರಾತ್ರಿ ಬೆಂಗಳೂರು ಗ್ರಾಮಾಂತರದ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಳ್ಳಿಪುರದಲ್ಲಿ ನಡೆದಿತ್ತು. ಸಿಸಿಬಿ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಐದಕ್ಕೂ ಹೆಚ್ಚು ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು.
ಮಾವಳ್ಳಿಪುರದ ಮನೆಯೊಂದರಲ್ಲಿ ಮಾದಕ ವಸ್ತುಗಳ ಸೇವನೆ, ಸಂಗ್ರಹಣೆಯ ಕುರಿತು ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರ ತಂಡ, ತಡರಾತ್ರಿ ಕಾರ್ಯಾಚರಣೆಗೆ ತೆರಳಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಮುಂದಾದ ಆರೋಪಿಗಳ ಗುಂಪು ಕಬ್ಬಿಣದ ರಾಡ್, ಕಲ್ಲು, ಹೆಲ್ಮೆಟ್‌ಗಳಿಂದ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದೆ.
ಜೀಪು ಜಖಂ:
ತಕ್ಷಣ ಸಿಸಿಬಿ ಪೊಲೀಸ್ ಸಿಬ್ಬಂದಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ರಾಜಾನುಕುಂಟೆ ಠಾಣೆಯ ಹೊಯ್ಸಳ ಸಿಬ್ಬಂದಿ ಮೇಲೂ ಆರೋಪಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದರು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಿಸಿಬಿ ಘಟಕದ ಜೀಪ್ ಮತ್ತು ರಾಜಾನುಕುಂಟೆ ಪೊಲೀಸ್ ಠಾಣೆಯ ಹೊಯ್ಸಳ ಜೀಪಿನ ಗಾಜುಗಳು ಜಖಂಗೊಂಡಿದ್ದವು.