ಖಾಕಿಗೆ ಸಿಕ್ಕಿಬಿದ್ದ ಹನಿಟ್ರ್ಯಾಪ್ ಆರತಿ

ಬೆಂಗಳೂರು,ಸೆ.೧೩- ಮಧ್ಯಪ್ರದೇಶದ ಅತಿದೊಡ್ಡ ಹೈ ಪ್ರೊಫೈಲ್ ಹನಿಟ್ರಾಪ್ ಪ್ರಕರಣದ ಮಾಸ್ಟರ್ ಮೈಂಡ್ ನಗರದಲ್ಲಿ ಸಿಕ್ಕಿಬಿದ್ದಿದ್ದಾಳೆ.
ಹನಿಟ್ರಾಪ್ ಪ್ರಕರಣದ ಮಾಸ್ಟರ್ ಮೈಂಡ್ ಆರತಿ ದಯಾಳ್‌ಳನ್ನು ಮಹದೇವಪುರ ಪೊಲೀಸರು ಬಂಧಿಸಿ ಮಧ್ಯಪ್ರದೇಶದ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಕಳೆದ ೨೦೧೯ ರಲ್ಲಿ ಮಧ್ಯಪ್ರದೇಶದಲ್ಲಿ ನಡೆದಿದ್ದ ಬಹುದೊಡ್ಡ ಹೈಪ್ರೋಫೈಲ್ ಹನಿಟ್ರಾಪ್ ಪ್ರಕರಣದಲ್ಲಿ ಜೈಲು ಸೇರಿ ೨೦೨೦ ರಲ್ಲಿ ಜಾಮೀನಿನ ಮೇಲೆ ಹೊರ ಬಂದು ನಾಪತ್ತೆಯಾಗಿದ್ದ ಸೋನು, ಸಮಂತಾ ಇನ್ನಿತರ ಹೆಸರುಗಳಿಂದ ಕುಖ್ಯಾತಿ ಪಡೆದಿದ್ದ ಆರತಿ ಅಗರ್ವಾಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಹನಿಟ್ರಾಪ್ ಮಾಡುತ್ತಿದ್ದ ಅರತಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಚೆನ್ನೈ ಸೇರಿ ವಿವಿಧ ಕಡೆ ದರೋಡೆ ಮಾಡುತ್ತಿದ್ದಳು. ಮೊದಲು ಸ್ಪಾಗಳಲ್ಲಿ ಕೆಲಸಕ್ಕೆ ಸೇರುತಿದ್ದ ಆರತಿ, ಹತ್ತು ದಿನ ಕೆಲಸ ಮಾಡಿ ಅಲ್ಲಿಯೇ ಕೆಲಸ ಮಾಡುವ ಯುವತಿಯರ ರೂಮ್ ,ಪಿಜಿ ಯಲ್ಲಿ ಉಳಿದುಕೊಂಡು ಬಳಿಕ ಅವರ ಹಣ ಬಂಗಾರ ಕದ್ದು ಪರಾರಿಯಾಗುತ್ತಿದ್ದಳು.
ಕಿಂಗ್‌ಪಿನ್ ಆರತಿ:
ಹನಿಟ್ರ್ಯಾಪ್ ಕಿಂಗ್‌ಪಿನ್ ಆರತಿ ಬಡ ಕುಟುಂಬದಿಂದ ಬಂದ ಕಾಲೇಜು ಯುವತಿಯರಿಗೆ ಐಷಾರಾಮಿ ಜೀವನವನ್ನು ಪರಿಚಯಿಸಿ ಅವರು ಅದರತ್ತ ಆಕರ್ಷಿತರಾಗುವಂತೆ ಮಾಡುತ್ತಿದ್ದ ಶ್ವೇತಾ ಹಾಗೂ ಆರತಿ ದಯಾಳ್ ನಂತರ ಹನಿಟ್ರ್ಯಾಪ್‌ಗೆ ಬಳಸಿಕೊಳ್ಳುತ್ತಿದ್ದರು. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಈ ಕಾಲೇಜು ಯುವತಿಯರನ್ನು ಒದಗಿಸುತ್ತಿದ್ದರು.
ರಾಜಕಾರಣಿಗಳು ಕಾಲೇಜು ಯುವತಿಯರಿಗೇ ಹೆಚ್ಚು ಡಿಮ್ಯಾಂಡ್ ಇಡುತ್ತಿದ್ದುದರಿಂದ ಶ್ವೇತಾ ಇಂಥದ್ದೊಂದು ಜಾಲ ಹೆಣೆದಿದ್ದಳು. ಜೊತೆಗೆ ೪೦ ವೇಶ್ಯೆಯರನ್ನೂ ಬಾಡಿಗೆ ಆಧಾರದಲ್ಲಿ ಇಟ್ಟುಕೊಂಡಿದ್ದಳು.ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಸಂಪರ್ಕ ಹೊಂದಿದ್ದ ಶ್ವೇತಾ ಆರತಿ ದಯಾಳ್ ಜೊತೆ ಸೇರಿಕೊಂಡು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗೂ ಯುವತಿ ಮತ್ತು ಮಹಿಳೆಯರನ್ನು ಕಳುಹಿಸುತ್ತಿದ್ದಳು ಎಂಬ ವಿಷಯ ವಿಚಾರಣೆ ವೇಳೆ ತಿಳಿದುಬಂದಿತ್ತು.
೩ ಕೋಟಿ ಹಫ್ತಾ ಬೇಡಿಕೆ:
ಇಂತಹದ್ದೇ ಹನಿಟ್ರ್ಯಾಪ್ ಪ್ರಕರಣವೊಂದರಲ್ಲಿ ಇಂದೋರ್ ಪುರಸಭೆಯ ಎಂಜಿನಿಯರ್ ಹರ್ಬಜನ್ ಸಿಂಗ್ ಅವರಿಗೆ ಆರತಿ ದಯಾಳ್ ಮತ್ತು ಮೋನಿಯಾ ಯಾದವ್ ಸೇರಿ ೩ ಕೋಟಿ ರೂ. ಹಫ್ತಾ ಬೇಡಿಕೆ ಇಟ್ಟಾಗ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಈ ಜಾಲದ ಕೃತ್ಯ ಬಯಲಾಗಿತ್ತು.
ಸೆಕ್ಸ್ ವಿಡಿಯೋ ಪತ್ತೆ:
ಇನ್ನು ಎಸ್‌ಐಟಿ ತನಿಖೆ ವೇಳೆ ಆರೋಪಿಗಳ ಬಳಿ ೧೦೦೦ಕ್ಕೂ ಅಧಿಕ ವಿಡಿಯೋ ಕ್ಲಿಪ್ಪಿಂಗ್‌ಗಳು, ಸೆಕ್ಸ್ ಚಾಟ್‌ಗಳು, ಬ್ಲಾಕ್‌ಮೇಲ್ ಮಾಡಲು ಇಟ್ಟುಕೊಂಡಿದ್ದ ವಿಡಿಯೋಗಳು ಸಿಕ್ಕಿದ್ದವು. ಇವುಗಳಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಅಧಿಕಾರಿಗಳ ಜೊತೆಗಿನ ಸೆಕ್ಸ್ ವಿಡಿಯೋಗಳು ಪತ್ತೆಯಾಗಿದ್ದವು.