ಖರ್ಜೂರ ಖರೀದಿಗೆ ಮುಗಿಬಿದ್ದ ಜನ

ಬೆಂಗಳೂರು, ಏ.೯- ರಾಜಧಾನಿ ಬೆಂಗಳೂರಿನಲ್ಲಿ ರಂಜಾನ್ ಮಾಸ ಹಿನ್ನೆಲೆ ಎಲ್ಲೆಲ್ಲೂ ಖಾದ್ಯಗಳ ಮಳಿಗೆಗಳು ತಲೆಎತ್ತಿದ್ದು, ಅದರಲ್ಲೂ ಖರ್ಜೂರ ಮಳಿಗೆಗಳು ವಿಶೇಷ ಗಮನ ಸೆಳೆದಿವೆ. ಈ ಬಾರಿ ಖರ್ಜೂರ ಖರೀದಿಗೆ ಮುಸ್ಲಿಮರ ಜತೆಗೆ ಬೇರೆ ಸಮುದಾಯದವರು ಮುಗಿಬೀಳುತ್ತಿದ್ದಾರೆ. ಕಳೆದ ೧೫ ದಿನಗಳಲ್ಲೇ ನಗರದಲ್ಲೇ ದಾಖಲೆಯ ಅಂದರೆ ೧೫೦ ಟನ್‌ಗೂ ಅಧಿಕ ಖರ್ಜೂರ ಮಾರಾಟವಾಗಿದೆ. ಶಿವಾಜಿನಗರ, ರಸೆಲ್ ಮಾರುಕಟ್ಟೆ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ಮಲ್ಲೇಶ್ವರ, ಜಯನಗರ ೪ನೇ ಬ್ಲಾಕ್, ಬಸವನಗುಡಿ, ಹಳೇ ತರಗುಪೇಟೆ, ಹೊಸ ತರಗುಪೇಟೆಗಳಲ್ಲಿ ಖರ್ಜೂರ ವ್ಯಾಪಾರ ಜೋರಾಗಿದೆ.
ಅದರಲ್ಲೂ ಶಿವಾಜಿನಗರದ ಐತಿಹಾಸಿಕ ರಸೆಲ್ ಮಾರ್ಕೆಟ್‌ನಲ್ಲಿರುವ ಮಹಮ್ಮದ್ ಇದ್ರೀಸ್ ಚೌಧರಿಯವರ “ಡೆಲೀಸಿಯಸ್ ಅಂಗಡಿಯ ಮುಂದೆ ಈಗ ದೊಡ್ಡ ಸಾಲು ನಿಂತಿದ್ದು, ಇಲ್ಲಿ ಸಿಗುವಷ್ಟು ಬಗೆ ಬಗೆಯ ಖರ್ಜೂರ, ಕರ್ನಾಟಕದ ಬೇರೆಲ್ಲೂ ಸಿಗುವುದಿಲ್ಲ.
ಪ್ರಪಂಚದಲ್ಲಿ ಒಟ್ಟು ೩೦೦ ಬಗೆಯ ಖರ್ಜೂರಗಳಿವೆ. ಅದರಲ್ಲಿ ಅತಿರುಚಿಯ ೬೪ ಖರ್ಜೂರಗಳನ್ನು ಇಂದ್ರೀಸ್, ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಈ ವರ್ಷ ಇಲ್ಲಿ ೯ ಹೊಸ ಬಗೆಯ, ಖರ್ಜೂರ ಚಾಕ್ಲೆಟುಗಳೂ ಗ್ರಾಹಕರನ್ನು ಸೆಳೆಯುತ್ತಿವೆ. ಇದ್ರೀಸ್ ಅವರ ಅಂಗಡಿ ಆರಂಭವಾಗಿದ್ದು, ೧೯೨೭ರಲ್ಲಿ. ಇಲ್ಲಿಗೆ ಇರಾನ್, ಇರಾಕ್, ಟರ್ಕಿ, ದಕ್ಷಿಣ ಆಫ್ರಿಕ, ಮೆಕ್ಕಾ, ಮದೀನಾ ಸೇರಿದಂತೆ ೭ ದೇಶಗಳಿಂದ ಒಣಹಣ್ಣುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಶ್ರೇಷ್ಠ ಗುಣಮಟ್ಟದ ಖರ್ಜೂರಗಳಾದ ಅಜ್ವಾ, ಮಡ್ ಜಾಲ್‌ಕಿಂಗ್, ಸುಕ್ರೀಲ್, ಮಬ್ರೂನ್, ಅಂಜೂರ, ಸಾಗಯ್, ಅಂಬುರ್‌ಗಳು ಇಲ್ಲಿ ಲಭ್ಯ. ಇವುಗಳ ಬೆಲೆ ಕೆ.ಜಿ.ಗೆ ೧೫೦ ರೂಪಾಯಿಗಳಿಂದ ೪೫೦೦ವರೆಗೂ ಇದೆ.
ಈ ಕುರಿತು ಪ್ರತಿಕ್ರಿಯಿಸಿದ ಶಿವಾಜಿನಗರದ ರಸೆಲ್ ಮಾರ್ಕೆಟ್ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇದ್ರೀಸ್ ಚೌಧರಿ, ಎಂದಿನಂತೆ ವಿಶೇಷವಾಗಿ ಖರ್ಜೂರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಮಾರುಕಟ್ಟೆಗೆ ಈ ಬಾರಿ ೨೭ಕ್ಕೂ ಹೆಚ್ಚು ಬಗೆಯ ಖರ್ಜೂರಗಳು ಮಾರಾಟಕ್ಕೆ ಬಂದಿವೆ. ಹಬ್ಬದ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ನಡೆಯುತ್ತಿದೆ ಎಂದರು.
ಅದು ಅಲ್ಲದೆ, ಕೋವಿಡ್ ಅವಧಿಯಲ್ಲಿ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿದ್ದರು. ಎರಡು ವರ್ಷಗಳ ಬಳಿಕ ಈ ಬಾರಿ ಬೇಡಿಕೆ ಹೆಚ್ಚಿದ್ದು, ವ್ಯಾಪಾರ ಚೇತರಿಸಿಕೊಂಡಿದೆ. ನಗರದಲ್ಲಿ ೧,೦೦೦ಕ್ಕೂ ಹೆಚ್ಚು ಖರ್ಜೂರ ಮಾರಾಟ ಅಂಗಡಿಗಳಿದ್ದು, ರಂಜಾನ್ ಮಾಸದಲ್ಲೇ ೧೫೦ ಟನ್‌ಗೂ ಅಧಿಕ ಖರ್ಜೂರ ಮಾರಾಟವಾಗುತ್ತದೆ ಎಂದು ಹೇಳಿದರು.

ಡ್ರೈಫ್ರೂಟ್ ದರ (ಕೆಜಿ)
ಸಗಾಯಿ .೭೦೦ ರೂ.
ಕಲ್ಮಿ .೭೦೦ ರೂ.
ಅಜ್ವಾ .೧೨೦೦ ರೂ.
ಮೆಡ್ಜಾಲ್ ಕಿಂಗ್ .೧೬೦೦ ರೂ.
ಇರಾನ್ ಖರ್ಜೂರ .೨೦೮೦ ರೂ.
ಒಣದ್ರಾಕ್ಷಿ .೨೮೦ ರೂ.
ಗೋಡಂಬಿ .೮೪೦ ರೂ.
ಬಾದಾಮಿ .೭೨೦ ರೂ.
ಅಷ್ಘಾನಿಸ್ತಾನ ಅಂಜೂರ .೧೪೦೦ ರೂ.
ಸಾದಾ ಅಂಜೂರ .೧೨೦೦ ರೂ.
ಪೈನಾ ನಟ್ .೪೦೦೦ ರೂ.
ಕಾಶ್ಮೀರಿ ಅಕ್ರೋಟ್ .೪೦೦ ರೂ.
ಕ್ಯಾಲಿಫೋರ್ನಿಯಾ ವಾಲ್ನಟ್ .೮೦೦ ರೂ.