
ಕೈ ಆರೋಪ
ಬೆಂಗಳೂರು,ಮೇ೬:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದವರ ಹತ್ಯೆಯ ಬಗ್ಗೆ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮಾತನಾಡಿರುವ ಆಡಿಯೋವನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ, ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಹತ್ಯೆಗೆ ಸಂಚು ನಡೆದಿದೆ ಎಂದು ಆರೋಪಿಸಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ, ರಾಷ್ಟ್ರೀಯ ವಕ್ತಾರ ಪವನ್ ಖೇರಾ ಬಿಜೆಪಿ ತನ್ನ ದ್ವೇಷದ ಮೂಲಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬವನ್ನು ಕೊಲ್ಲುವ ಸಂಚು ರೂಪಿಸಿದೆ. ಹತ್ಯೆಗೆ ಸಂಚು ನಡೆದಿದ್ದರೂ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ ಎಂದು ಹರಿಹಾಯ್ದರು.
ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ರವಿ ಎಂಬ ವ್ಯಕ್ತಿಯ ಜತೆ ಸಂಭಾಷಣೆಯಲ್ಲಿ ಖರ್ಗೆ ಕುಟುಂಬವನ್ನು ಸಾಫ್ ಮಾಡುತ್ತೇವೆ. ಬಿಲಾವತ್ ಹೆಚ್ಚು ದಿನ ಇರಲ್ಲ ಎಂದು ಹೇಳಿರುವ ಆಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.
ಈ ಆಡಿಯೋದಲ್ಲಿರುವ ಸಂಭಾಷಣೆಯನ್ನು ಗಮನಿಸಿದರೆ, ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿರವರ ನೀಲಿ ಕಂಗಳ ಹುಡುಗ ಮಣಿಕಂಠ ರಾಥೋಡ್ ಖರ್ಗೆ ಹತ್ಯೆಗೆ ಸಂಚು ಮಾಡಿರುವುದು ಗೊತ್ತಾಗುತ್ತದೆ. ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ತೋರುತ್ತಿರುವುದರಿಂದ ಹತಾಶರಾಗಿ ಬಿಜೆಪಿ ನಾಯಕರು ಹತ್ಯೆಯ ಸಂಚು ಮಾಡುವ ಹಂತಕ್ಕೆ ತಲುಪಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪತ್ನಿ, ಮಕ್ಕಳ ಹತ್ಯೆಗೆ ಸಂಚು ರೂಪಿಸಿರುವುದು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದ ಅವರು, ಇಷ್ಟೆಲ್ಲ ಆದರೂ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಮೌನಕ್ಕೆ ಶರಣಾಗಿದೆ. ಆದರೆ, ರಾಜ್ಯದ ಜನ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದರು.
ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡುವಿರಾ ಎಂಬ ಪ್ರಶ್ನೆಗೆ ಚುನಾವಣಾ ಆಯೋಗ ಕಾಂಗ್ರೆಸ್ ನಾಯಕರಿಗೆ ಮಾತ್ರ ನೋಟಿಸ್ ನೀಡುತ್ತಿದೆ. ಅಮಿತ್ ಶಾ, ಮೋದಿ ಅವರು, ಚುನಾವಣಾ ಆಯೋಗ ಹಾಗು ದೇಶದ ಕಾನೂನನ್ನು ನಿಯಂತ್ರಿಸುತ್ತಿದ್ದಾರೆ. ಬಿಜೆಪಿ ನಾಯಕರು ನಿರಂತವಾಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಯಾವ ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸುವಷ್ಟು ನೀಚ ಮಟ್ಟಕ್ಕೆ ಇಳಿಯುವುದಾದರೆ ಅವರ ಹತ್ಯೆ ಮಾಡಿ, ಆ ಮೂಲಕವಾದರೂ ಬಿಜೆಪಿಯ ರಕ್ತದಾಹ ನೀಗುವುದಾದರೆ ನೀಗಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸಚಿವ ಅಶ್ವತ್ಥ ನಾರಾಯಣ ಅವರು ಸಿದ್ದರಾಮಯ್ಯರವರ ವಿಚಾರದಲ್ಲೂ ಇದೇ ರೀತಿಯ ಮಾತುಗಳನ್ನಾಡಿದರು. ಬಿಜೆಪಿಯ ಹತಾಶೆ ಹತ್ಯೆ ಮಾಡುವ ಹಂತಕ್ಕೆ ತಲುಪಿದೆ. ಇಷ್ಟಾದರೂ ಪ್ರಧಾನಿ ಮೋದಿಯಾಗಲಿ, ಮುಖ್ಯಮಂತ್ರಿ ಬೊಮ್ಮಾಯಿಯಾಗಲಿ ಉತ್ತರ ನೀಡುತ್ತಿಲ್ಲ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಆಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ:ಸಿಎಂ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಸ್ಥರ ಹತ್ಯೆ ಕುರಿತು ಮಣಿಕಂಠ ರಾಥೋಡ್ ಮಾತನಾಡಿರುವ ಆಡಿಯೋ ಬಗ್ಗೆ ಪ್ರಕರಣ ದಾಖಲಿಸಿ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣಿಕಂಠ ರಾಥೋಡ್ ಮಾತನಾಡಿದ ಆಡಿಯೋ ತಿರುಚಲಾಗಿದೆಯೇ ಏನು ಎತ್ತ ಎಂಬುದನ್ನು ಪರಿಶೀಲಿಸಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದರು.